LATEST NEWS
ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಪುತ್ತೂರಿನ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಪುತ್ತೂರಿನ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ
ಮಂಗಳೂರು ಅಕ್ಟೋಬರ್ 10: ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಪುತ್ತೂರಿನ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದ್ದವು. ಕೆಲ ಕಾಲ ಹೆದ್ದಾರಿಯನ್ನು ತಡೆ ನಡೆಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಸರಿಪಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದಿದೆ. ಆದರೆ ಈ ವರೆಗೂ ಕಾಮಗಾರಿಯು ಕುಂಟುತ್ತಾ ಸಾಗುತ್ತಿದೆ. ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಎಲ್.ಎನ್.ಟಿ ಕಂಪನಿಯು ಕೆಲವಾರು ಸಮಸ್ಯೆಯಿಂದಾಗಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತ್ತು.

ಕಾಮಗಾರಿಗಾಗಿ ರಸ್ತೆಯನ್ನು ಅಲ್ಲಲ್ಲಿ ಅಗೆದ ಪರಿಣಾಮ ವಾಹನ ಸವಾರರಿಗೆ ಭಾರೀ ತೊಂದರೆಯಾಗಿತ್ತು. ಈ ನಡುವೆ ರಸ್ತೆಯ ಕಾಮಗಾರಿಯಿಂದ ಕಂಪನಿ ಹಿಂದೆ ಸರಿದ ಹಿನ್ನಲೆಯಲ್ಲಿ ರಸ್ತೆಯು ಸಂಪೂರ್ಣ ನಾದುರಸ್ತಿಗೆ ತಲುಪಿದೆ. ರಸ್ತೆಯ ತುಂಬಾ ಹೊಂಡ-ಗುಂಡಿಗಳು ತುಂಬಿದ ಪರಿಣಾಮ ರಸ್ತೆಯನ್ನು ಸರಿಪಡಿಸುವಂತೆ ಹಲವು ಪ್ರತಿಭಟನೆಗಳೂ ನಡೆದಿತ್ತು. ಇದೀಗ ಮತ್ತೆ ನೆಲ್ಯಾಡಿ ಪೇಟೆಯಲ್ಲಿ ಹಲವು ಸಂಘಟನೆಗಳು ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಜನ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಳೆ ಹಾಗೂ ಜಮೀನು ಒತ್ತುವರಿ ಸಮಸ್ಯೆಯಿಂದಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಅಧಿಕಾರಿಗಳ ಸ್ಪಷ್ಟನೆ. ಅಲ್ಲದೆ ಕಾಮಗಾರಿ ವಹಿಸಿಕೊಂಡ ಎಲ್.ಎನ್.ಟಿ ಕಂಪನಿಯು ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿದ ಪರಿಣಾಮ ಈ ಸಮಸ್ಯೆಗೆ ಕಾರಣವಾಗಿದೆ. ಎರಡು ವಾರದಲ್ಲಿ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ಮುಗಿಸಲಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಹೊಸ ಟೆಂಡರ್ ಕರೆದು ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಕಾಮಗಾರಿ ಆರಂಭಗೊಳ್ಳಲಿದೆ.