LATEST NEWS
ಟ್ಯಾಂಕರ್ ಯಾರ್ಡ್ ವಿರುದ್ಧ ರೊಚ್ಚಿಗೆದ್ದ ಬಾಳ ಗ್ರಾಮಸ್ಥರು…!!
ಮಂಗಳೂರು : ಸುರತ್ಕಲ್ ಬಾಳ ಗ್ರಾಮದ ಎಂ ಆರ್ ಪಿಎಲ್ ರಸ್ತೆಯಲ್ಲಿ ಸರ್ವೇ ನಂಬರ್ 185ರಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣ ಮಾಡಲು ಕಂಪೆನಿ ಸ್ಥಳೀಯ ವ್ಯಕ್ತಿಗೆ ಗುತ್ತಿಗೆ ನೀಡಿದ್ದರ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದ್ದು, ಧರಣಿ ನಡೆಸಿ ಪಿಡಿಒ ಮತ್ತು ಅಧಿಕಾರಿಗಳ ಸಮಕ್ಷಮ ಬೋರ್ಡ್ ತೆಗೆಸಿದ್ದಲ್ಲದೆ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಿದ್ದಾರೆ.
ಒಟ್ಟೆಕಾಯರ್ ಪರಿಸರದಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣವಾದರೆ ಪರಿಸರದ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಅನೇಕ ಬಾರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಂಪೆನಿ ಪ್ರತಿಭಟನೆಗೆ ಮಣಿಯದೆ ಟ್ಯಾಂಕರ್ ಯಾರ್ಡ್ ನಿರ್ಮಾಣಕ್ಕೆ ಗುತ್ತಿಗೆ ನೀಡಿದೆ. ಗುರುವಾರ ಮುಂಜಾನೆ ಇಲ್ಲಿನ ರಸ್ತೆ ಪಕ್ಕ ಬೋರ್ಡ್ ಅಳವಡಿಸಿದ್ದು ಶೆಡ್ ಗೆ ವಿದ್ಯುತ್ ಸಂಪರ್ಕವನ್ನೂ ಅನಧಿಕೃತವಾಗಿ ನೀಡಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್ ಯಾರ್ಡ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದ ನಿವಾಸಿಗಳು ಹೆಚ್ಚಿನವರು ಉದ್ಯೋಗ ನಿಮಿತ್ತ ಹಗಲು ವೇಳೆ ಮನೆಯಲ್ಲಿ ಇಲ್ಲದೆ ಇದ್ದು ಟ್ಯಾಂಕರ್ ನಿಲ್ಲಿಸುವುದರಿಂದ ಸ್ಥಳೀಯವಾಗಿ ಅಭದ್ರತೆ ನಿರ್ಮಾಣವಾಗಲಿದೆ. ಟ್ಯಾಂಕರ್ ಚಾಲಕ, ಕ್ಲೀನರ್ ಗಳು ಪರಿಸರವನ್ನು ಅಂದಗೆಡಿಸುತ್ತಿದ್ದು ಮನೆಯಲ್ಲಿ ಹೆಣ್ಣುಮಕ್ಕಳನ್ನು ಬಿಡಲು ಭಯದ ವಾತಾವರಣ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.