LATEST NEWS
ಗಂಡು ಮಗುವಿಗೆ ಜನ್ಮ ನೀಡಿ ಸಾವನಪ್ಪಿದ ತಾಯಿ – ವೈದ್ಯರ ನಿರ್ಲಕ್ಷ ಆರೋಪಿಸಿ ಸಂಬಂಧಿಕರ ಪ್ರತಿಭಟನೆ
ಉಡುಪಿ ಸೆಪ್ಟೆಂಬರ್ 25: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷವೇ ಮಹಿಳೆ ಸಾವಿಗೆ ಕಾರಣ ಎಂದು ಆರೋಪಿಸಿ ಮಹಿಳೆ ಸಂಬಂಧಿಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ನಿವಾಸಿ ಉಷಾ ಚೊಚ್ಚಲ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆರಿಗೆಯ ಬಳಿಕ ಉಂಟಾದ ಸಮಸ್ಯೆಯಿಂದ ಮಹಿಳೆ ಮಗು ಹೆತ್ತ ಬಳಿಕ ಸಾವನಪ್ಪಿದ್ದಾರೆ.
ಆದರೆ ಮಹಿಳೆ ಸಂಬಂಧಿಕರ ಪ್ರಕಾರ ಹೆರಿಗೆಯ ಸಮಯ ಬಂದಾಗ ವೈದ್ಯರು ಇನ್ನು ನಮಗೆ ಚಿಕಿತ್ಸೆ ನೀಡುವುದಕ್ಕೆ ಆಗೋಲ್ಲ ಬೇರೆ ಆಸ್ಪತ್ರೆಗೆ ಕೊಂಡೊಯ್ಯಿರಿ ಎಂದು ಹೇಳಿದ್ದಾರೆ. ಮಣಿಪಾಲದ ಖಾಸಗಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಷಾ ಅಸುನೀಗಿದ್ದಾರೆ.
ಕಳೆದ ಮೂರು ದಿನಗಳಿಂದ ಬಿಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾರ್ಮಲ್ ಹೆರಿಗೆ ಸಾಧ್ಯವಿಲ್ಲ ಎಂದಾದರೆ ಸಿಸೇರಿಯನ್ ಮಾಡಬಹುದಿತ್ತು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಷ್ಟ ಎಂದು ಮೊದಲೇ ತಿಳಿಸಿದ್ದರೆ ಮಣಿಪಾಲಕ್ಕೆ ಡೊಯುತ್ತಿದ್ದೆವು. ಏನನ್ನೂ ಮಾಡದೆ ಇದೀಗ ಶವ ಮನೆಗೆ ಕೊಂಡೊಯ್ಯಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಣಂತಿಯ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿ ಸುದೀರ್ಘಕಾಲ ಪ್ರತಿಭಟನೆ ನಡೆಸಿದ್ದಾರೆ.ಕಣ್ಣೀರಿಡುತ್ತಲೇ ಆಸ್ಪತ್ರೆಗೆ ನುಗ್ಗಲು ಎತ್ತಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರನ್ನು ಕೂಡಲೆ ಸ್ಥಳಕ್ಕೆ ಕರೆಸುವಂತೆ ಒತ್ತಾಯ ಮಾಡಿದ್ದಾರೆ. ಅಮಾಯಕ ಜೀವವನ್ನು ಬಲಿ ತೆಗೆದುಕೊಂಡವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕುಟುಂಬಿಕರ ಆಕ್ರೋಶದಿಂದ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಸರ್ಜನ್ ಹಾಗೂ ಹಿರಿಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಹೆರಿಗೆಯಾದ ಬಳಿಕ ಮಹಿಳೆಯಲ್ಲಿ ಮೂರ್ಛೆ ರೋಗ ಕಾಣಿಸಿಕೊಂಡಿದೆ, ಕೂಡಲೇ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.