DAKSHINA KANNADA
ಕೊನೆಗೂ ಬಂದ್ ಆಯ್ತು ಮದ್ಯದಂಗಡಿ
ಪುತ್ತೂರು,ಸೆಪ್ಟಂಬರ್ 22:ಸರಕಾರಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪುತ್ತೂರು ತಾಲೂಕಿನ ಕಡಬದ ಕಲ್ಲುಗುಡ್ಡೆಯ ಮದ್ಯದಂಗಡಿಗೆ ಕೊನೆಗೂ ಬಂದ್ ಭಾಗ್ಯ ದೊರೆತಿದೆ. ಮದ್ಯದಂಗಡಿಯನ್ನು ಮುಚ್ಚಬೇಕೆಂದ ಆಗ್ರಹಿಸಿ ಕಳೆದ 10 ದಿನಗಳಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಹೋರಾಟಕ್ಕೆ ಇದರಿಂದ ಯಶಸ್ಸು ಸಿಕ್ಕಂತಾಗಿದೆ. ಕಳೆದೆರಡು ದಿನಗಳಿಂದ ತಮ್ಮ ಪ್ರತಿಭಟನೆಯನ್ನು ತೀವೃಗೊಳಿಸಿದ್ದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಮಕ್ಕಳನ್ನೂ ಸೇರಿಸಿಕೊಂಡಿದ್ದರು.ಅಲ್ಲದೆ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆ ಹಾಗೂ ಪುತ್ತೂರು ಸಹಾಯಕ ಕಮಿಷನರ್ ಗೂ ದಿಗ್ಭಂಧನ ಹಾಕಿದ್ದರು. ಇದರಿಂದ ಚುರುಕುಗೊಂಡ ಅಧಿಕಾರಿ ವರ್ಗ ನಿನ್ನೆ ಸ್ಥಳದ ಸರ್ವೆಯನ್ನು ನಡೆಸಿತ್ತು. ಸರ್ವೆಯಲ್ಲಿ ಮದ್ಯದಂಗಡಿ ಇರುವ ಜಾಗ ಸರಕಾರಿ ಜಾಗವೆಂದು ತಿಳಿದುಬಂದ ಹಿನ್ನಲೆಯಲ್ಲಿ ಇದೀಗ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಮದ್ಯದಂಗಡಿ ಹಾಗೂ ಕಟ್ಟಡವನ್ನು ನೆಲಸಮಗೊಳಿಸಲು ಆದೇಶ ನೀಡಿದ್ದಾರೆ. ಇದೀಗ ಸ್ಥಳೀಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಪ್ರತಿಗಾಗಿ ಕಾಯುತ್ತಿದ್ದು, ಆದೇಶ ಪ್ರತಿ ಸಿಕ್ಕಿದ ಕೂಡಲೇ ಕಟ್ಟಡದ ನೆಲಸಮ ಕಾರ್ಯ ನಡೆಯಲಿದೆ.