DAKSHINA KANNADA
ಮದ್ಯದಂಗಡಿ ವಿರೋಧಿಸಿ ಮುಷ್ಕರ
ಮದ್ಯದಂಗಡಿ ವಿರೋಧಿಸಿ ಮುಷ್ಕರ
ಪುತ್ತೂರು,ಸೆಪ್ಟಂಬರ್ 18: ಸರಕಾರಿ ಜಮೀನಿನಲ್ಲಿ ಆರಂಭವಾದ ಮದ್ಯದಂಗಡಿಯನ್ನು ಮುಚ್ಚಬೇಕೆಂದು ಆಗ್ರಹಿಸಿ ಪುತ್ತೂರು ತಾಲೂಕಿನ ಕಡಬ ನೂಜಿಬಾಳ್ತಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟಂಬರ್ 10 ರಂದು ನೂಜಿಬಾಳ್ತಿಲದ ಕಲ್ಲುಗುಡ್ಡೆಯ ಪೇಟೆಯಲ್ಲಿರುವ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ದಿಢೀರನೆ ಈ ಮದ್ಯದಂಗಡಿ ಆರಂಭವಾಗಿದ್ದು, ಇದನ್ನು ಮುಚ್ಚಬೇಕೆಂದು ಸ್ಥಳೀಯ ಗ್ರಾಮಸ್ಥರು ಅಂದೇ ಪ್ರತಿಭಟನೆಯ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದರು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಭಾನುವಾರದಂದೇ ಮದ್ಯದಂಗಡಿಗೆ ಬೀಗ ಜಡಿದಿದ್ದರು. ಆದರೆ ಸೋಮವಾರ ಮತ್ತೆ ಅದೇ ಪ್ರದೇಶದಲ್ಲಿ ಎಂದಿನಂತೆ ಮದ್ಯದಂಗಡಿ ತೆರೆಯಲಾಗಿದ್ದು, ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರೂ, ಇಂದಿನ ವರೆಗೂ ಇದನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿಲ್ಲ.
ಧರ್ಮಸ್ಥಳ ಗ್ರಾಮಾಭಿವೃದ್ಧ ಯೋಜನೆ, ದಲಿತ ಸಂಘಟನೆಗಳು, ನೂಜಿಬಾಳ್ತಿಲ ಗ್ರಾಮಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಮದ್ಯದಂಗಡಿಯನ್ನು ವಿರೋಧಿಸಿ ಪ್ರತಿನಿತ್ಯ ಪ್ರತಿಭಟನೆ ಹಾಗೂ ಮುಷ್ಕರವನ್ನು ನಡೆಸುತ್ತಿದೆ. ಈ ಬಗ್ಗೆ ನೂಜಿಬಾಳ್ತಿಲ ಗ್ರಾಮಸಭೆಯಲ್ಲೂ ತೀವೃ ವಿರೋಧವಿದೆ ಎನ್ನುವ ನಿರ್ಣಯವನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಆದರೆ ಮದ್ಯದಂಗಡಿ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ.
ಗ್ರಾಮಸ್ಥರು ಮದ್ಯದಂಗಡಿಯನ್ನು ಮುಚ್ಚಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಮುಷ್ಕರಕ್ಕೆ ಇಂದಿಗೆ 8 ದಿನಗಳು ಕಳೆದಿವೆ. ಆದರೆ ಸಂಬಂಧಪಟ್ಟ ಇಲಾಖೆಗಳು ಮಾತ್ರ ಗ್ರಾಮಸ್ಥರ ಬೇಡಿಕೆಗೆ ಮನ್ನಣೆಯನ್ನೇ ಕೊಡದಿರುವುದು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.