LATEST NEWS
ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ; ವಿಕೋಪಕ್ಕೆ ? ಬೆಳಗ್ಗೆ ತೆರೆದ ಮದ್ಯದಂಗಡಿ ಸಂಜೆ ತಾತ್ಕಾಲಿಕ ಬಂದ್ !
ಸುಬ್ರಹ್ಮಣ್ಯ, ನವೆಂಬರ್.05: ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿ, ವಿಶೇಷ ಗ್ರಾಮ ಸಭೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದರೂ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ಶುಕ್ರವಾರ ಮದ್ಯದಂಗಡಿ ಒಮ್ಮೆಲೆ ತೆರೆದುಕೊಂದಿದ್ದು ಮಾಹಿತಿ ದೊರೆತ ಊರಿನವರು, ಗ್ರಾಮಸ್ಥರು, ಮದ್ಯವಿರೋಧಿ ಹೋರಾಟ ಸಮಿತಿಯವರು, ಪಕ್ಕದ ಗ್ರಾಮಸ್ಥರು, ಅಲ್ಲಿನ ಮದ್ಯದಂಗಡಿ ವಿರೋಧಿ ಸಮಿತಿಯವರು ಮದ್ಯದಂಗಡಿ ಬಳಿಗೆ ಧಾವಿಸಿ ಬಂದು ಪ್ರತಿಭಟನೆ ನಡೆಸಿದ್ದು, ಇದು ವಿಕೋಪಕ್ಕೂ ತಿರುಗಿದ ಘಟನೆ ನಡೆದಿದೆ.
ಹರಿಹರಪಲ್ಲತ್ತಡ್ಕ ಪೇಟೆ ಬಳಿ ಶುಕ್ರವಾರ ಮಂಗಳಾ ಬಾರ್ & ರೆಸ್ಟೋರೆಂಟ್ ಹೆಸರಿನಲ್ಲಿ ಅಂಗಡಿ ತೆರದುಕೊಂಡಿದ್ದು, ಮದ್ಯ ಮಾರಾಟ ಮುಕ್ತ ಹೋರಾಟಗಾರು,ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿಯ ಮೆಟ್ಟಲಿನಲ್ಲಿ ಕುಳಿತು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ಆರಂಭವಾಗುವುದನ್ನು ತಡೆಯಲು ಹೋರಾಟ ನಡೆಸಲಾಗುತಿತ್ತು.
ಆದರೆ ಶುಕ್ರವಾರ ಬಾರ್ & ರೆಸ್ಟೋರೆಂಟ್ ಆರಂಭವಾಗಿದ್ದು ಹೋರಾಟಗಾರರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿ ಜಮಾಯಿಸಿದ್ದರು. ಬೆಳಗ್ಗೆಯಿಂದ ಸಂಜೆ ತನಕವು ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಮದ್ಯದಂಗಡಿ ಪರ ಬೇರೆ ಸ್ಥಳಗಳಿಂದ ಬಂದಿದ್ದವರಿಗೂ, ಹೋರಾಟಗಾರರ ಮದ್ಯೆ ಮಾತಿನ ಚಕಮಿಕಿ, ನೂಕಾಟ ತಳ್ಳಾಟ ನಡೆದಿದೆ. ಮದ್ಯದಂಗಡಿ ಬಂದ್ ಮಾಡುವಂತೆ ಕತ್ತಲಾಗುವ ತನಕವೂ ಆಗ್ರಹಿಸಿದ್ದರು. ಸಂಜೆ ವೇಳೆ ಪ್ರತಿಭಟನೆ ವಿಕೋಪಕ್ಕೂ ತಿರುಗಿದೆ. ಆಕ್ರೋಶಿತ ಪ್ರತಿಭಟನಾಕಾರರು ಮದ್ಯದಂಗಡಿ ಬಳಿ ಇದ್ದ ಚಯರ್, ನಾಮಫಲಕ ಕಿತ್ತು ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಮದ್ಯಅಂಗಡಿ ಬಂದ್ ಮಾಡಲೇ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾತ್ಕಾಲಿಕ ಬಂದ್: ಮದ್ಯದಂಗಡಿ ಬಂದ್ ಮಾಡಲು ಬಾರ್ ಕಡೆಯವರನ್ನು ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಮೊದಲಾದ ಪ್ರಮುಖರು ಮನವೊಲಿಸಲು ಯತ್ನಿಸಿದ ವೇಳೆ ಮದ್ಯದಂಗಡಿ ಪರ ಬಂದವರು ಮುಖಂಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಕ್ಷಣ ಕಾಲ ಉದ್ನಿಗ್ನ ವಾತಾವರಣ ನಿರ್ಮಾಣಗೊಂಡ ಘಟನೆಯು ನಡೆಯಿತು. ರಾತ್ರಿ ವೇಳೆ ಸಚಿವ ಎಸ್. ಅಂಗಾರ ಅವರ ಸೂಚನೆಯಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿ ಮದ್ಯದಂಗಡಿ ಬಂದ್ ಮಾಡುವಂತೆ ಬಾರ್ ಮಾಲಕರಿಗೆ ಸೂಚಿಸಿದ್ದಾರೆ. ಅದರಂತೆ ಬಾರ್ ತಾತ್ಕಾಲಿಕ ಬಂದ್ ಮಾಡಲಾಯಿತು. ಅದರಂತೆ ಗ್ರಾಮಸ್ಥರು ಸ್ಥಳದಿಂದ ಮರಳಿದರು.
ಶನಿವಾರ ಮದ್ಯದಂಗಡಿ ಮತ್ತೆ ತೆರೆದುಕೊಳ್ಳದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ಮದ್ಯದಂಗಡಿ ತೆರೆದಲ್ಲಿ ಮತ್ತೆ ನಡೆಯುವ ಎಲ್ಲಾ ಅನಾಹುತಗಳಿಗೂ ಜಿಲ್ಲಾಡಳಿತವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರ ಸಹಿತ ಬ್ರಹತ್ ಸಂಖ್ಯೆಯಲ್ಕಿ ಜನ ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅಕ್ಕ-ಪಕ್ಕದ ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳದಲ್ಲಿದ್ದು ಬಂದೊಬಸ್ತ್ ಏರ್ಪಡಿಸಿದ್ದರು. ಸಂಜೆ ವೇಳೆ ಮುಂಜಾಗ್ರತೆ ಕ್ರಮವಾಗಿ ಪೇಟೆಯ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು.
ಒಂದು ಕಾಲದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತಿದ್ದ ಗ್ರಾಮದಲ್ಲಿ ಈ ಹಿಂದೆ ಬಾರಿ ಹೋರಾಟ ನಡೆಸಿ ಶರಾಬು ಅಂಗಡಿ ಬಂದ್ ಆದ ಗ್ರಾಮವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಶರಾಬು ಅಂಗಡಿ ಬಂದ್ ಆದ ಗ್ರಾಮವು ಆಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡೆವು ಎನ್ನುವ ಜಿದ್ದಿಗೆ ಗ್ರಾಮಸ್ಥರು ಬಿದ್ದಿದ್ದಾರೆ.