DAKSHINA KANNADA
ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ಆರೋಪಿಗಳ ಆಸ್ತಿ ಮುಟ್ಟುಗೋಲು: ADGP ಅಲೋಕ್ ಕುಮಾರ್

ಮಂಗಳೂರು, ಆಗಸ್ಟ್ 05: ಈವರೆಗೆ ತಲೆಮರೆಸಿಕೊಂಡಿರುವ ಆರೋಪಿಗಳು ಹಾಗೂ ಮತ್ತೆ ಗಲಭೆ ಕೃತ್ಯಕ್ಕೆ ಇಳಿದಿರುವ ಆರೋಪಿಗಳ ವಿರುದ್ಧ ಆಸ್ತಿಮುಟ್ಟುಗೋಲು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಿನ್ನೆ ದ.ಕ, ಉಡುಪಿ ಹಾಗೂ ಮಂಗಳೂರು ಕಮಿಷನರೇಟ್‌ನ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ಆಗಾಗ ಕೋಮು ಸಂಘರ್ಷ ಉಟಾಗುವುದನ್ನು ತಪ್ಪಿಸುವುದಕ್ಕೆ ಇಂತಹ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ.

ಕೋಮು ಕೇಸಿಗೆ ಸಂಧಿಸಿದಂತೆ ಆರೋಪಿಗಳು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಮೇಲೆ ಯಾವುದಾದರೂ ಪ್ರಿವೆಂಟಿವ್ ಆಗಿ ರೌಡಿ ಶೀಟ್ ತೆರೆಯುವ ಕೆಲಸ ಆಗಿದೆಯಾ? ಕೇಸಿನ ವಿಚಾರಣೆ ಹೇಗೆ. ನಡೆಯುತ್ತಿದೆ ಎಂಬಿತ್ಯಾದಿ ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕು.
ಶರತ್ ಮಡಿವಾಳ ಹತ್ಯೆ, ದೀಪಕ್ ರಾವ್ ಹತ್ಯೆ, ಪಿಂಕಿ ನವಾಜ್ ಹತ್ಯೆ ಯತ್ನದಂತಹ ಅನೇಕ ಪ್ರಕರಣಗಳಲ್ಲಿ ವಿಚಾರಣೆ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ. ಕೆಲವೊಮ್ಮೆ ಆರೋಪಿಗಳು ಜಾಮೀನು ಪಡೆದು ಹೊರಬರುವುದು, ತನಿಖೆ ಸರಿಯಾಗಿ ನಡೆಯದ ಕೇಸ್ ಖುಲಾಸೆಯಾಗಿ ಹೊರಬಂದು ಆರೋಪಿಗಳು ಮತ್ತೆ ಅಂತಹ ಕೃತ್ಯ ಮುಂದುವರಿಸುವುದು ಆಗಬಾರದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೋಮುಗಲಭೆಯಲ್ಲಿದ್ದ ಕೆಲವೊಂದು ಆರೋಪಿಗಳು ತಲೆಮರೆಸಿಕೊ೦ಡಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಪಿಂಕಿ ನವಾಜ್ ಹತ್ಯೆ ಯತ್ನ ಪ್ರಕರಣ ಆರೋಪಿ ನೌಷಾದ್ ಎಂಬಾತ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.