LATEST NEWS
ಲಾಕ್ ಡೌನ್ ಎಫೆಕ್ಟ್… ಖಾಸಗಿ ಬಸ್ ಗಳ ಸುತ್ತ ಬೆಳೆದ ಪೊದೆ

ಮಂಗಳೂರು ಜುಲೈ 7: ಕೊರೊನಾ ಲಾಕ್ ಡೌನ್ ಪರಿಣಾಮ ಕರಾವಳಿಯ ಜೀವನಾಡಿಯಾಗಿರುವ ಖಾಸಗಿ ಬಸ್ ಗಳ ಪರಿಸ್ಥಿತಿಯ ಕುರಿತ ಪೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವರ್ಷವೀಡಿ ಜನರಿಗೆ ಸೇವೆ ನೀಡುತ್ತಿದ್ದ ಬಸ್ ಗಳು ಇಂದು ಮೂಲೆ ಸೇರಿದ್ದು, ಬಸ್ ಗಳ ಮೇಲೆ ಬಳ್ಳಿಗಳು ಹಬ್ಬುವ ಹಂತಕ್ಕೆ ಬಂದು ನಿಂತಿವೆ.
ಬಹುತೇಕ ಕರಾವಳಿಯಲ್ಲಿ ಜನರು ಸಂಚಾರಕ್ಕೆ ಖಾಸಗಿ ಬಸ್ ಗಳನ್ನೇ ಅವಲಂಭಿಸಿದ್ದಾರೆ. ನಿಮಿಷಕ್ಕೊಂದರಂತೆ ಬಸ್ ಗಳು ಕರಾವಳಿಯಲ್ಲಿ ಚಲಿಸುತ್ತಿರುತ್ತವೆ. ಮುಂಬೈಯಲ್ಲಿ ಹೇಗೆ ಲೋಕಲ್ ಟ್ರೈನ್ ಗಳು ಜನರ ಜೀವನಾಡಿಯಾಗಿವೆಯೋ ಹಾಗೆ ಕರಾವಳಿಯಲ್ಲಿ ಖಾಸಗಿ ಬಸ್ ಗಳು ಜನರ ಜೀವನಾಡಿಯಾಗಿವೆ.

ಆದರೆ ಕೊರೊನಾ ಬಂದ ನಂತರ ಖಾಸಗಿ ಬಸ್ ಗಳ ಸ್ಥಿತಿ ಹೇಳ ತೀರದಂತಾಗಿದೆ. ಖಾಸಗಿ ಬಸ್ಸುಗಳು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮಂಗಳೂರಿನ ಬಸ್ಸುಗಳ ಕೊರೊನಾ ಸಂಕಷ್ಟ ಇದು. ಲಾಕ್ ಡೌನ್ ತೆರವಾದರೂ ಪ್ರಯಾಣಿಕರ ಸಂಖ್ಯೆ ತೀವ್ರ ಕುಸಿತ ಕಂಡಿದ್ದರಿಂದ ಶೇಕಡ 35 ರಷ್ಟು ಮಾತ್ರ ಬಸ್ಸುಗಳ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿವೆ. ಉಳಿದ ಬಸ್ ಗಳು ಲಾಕ್ ಡೌನ್ ಪ್ರಾರಂಭದ ದಿನದಿಂದ ನಿಂತಲ್ಲೆ ಇವೆ. ಈ ನಡುವೆ ಮಳೆಗಾಲ ಆರಂಭವಾಗಿದ್ದರಿಂದ ಬಸ್ ಗಳ ಸುತ್ತಲಿನ ಪೊದೆಗಳು ಬಸ್ ನ್ನು ಮೀರಿಸಿ ಬೆಳೆದಿವೆ. ಈ ಮೂಲಕ ಜಿಲ್ಲೆಯ ಸದ್ಯದ ಆರ್ಥಿಕ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.
ಜೂನ್ 1 ರಿಂದ ಮಂಗಳೂರಿನಲ್ಲಿ ಸಿಟಿ ಬಸ್ ಸಂಚಾರ ಆರಂಭಿಸಿದ್ದವು, ಕೊರೊನಾ ಆತಂಕದ ಕಾರಣದಿಂದ ಹೆಚ್ಚಿನವರು ಬಸ್ಸುಗಳಲ್ಲಿ ಓಡಾಟ ನಡೆಸಲು ಹಿಂದೇಟು ಹಾಕಿದ್ದರು. ಈ ಹಿನ್ನಲೆ ಬಸ್ ಮಾಲೀಕರಿಗೆ ಬಸ್ ಓಡಿಸುವುದು ನಷ್ಟಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಸದ್ಯದ ಡಿಸೇಲ್ ಬೆಲೆ ಏರಿಕೆಯೂ ಬಸ್ ಸಂಚಾರಕ್ಕೆ ಭಾರೀ ತೊಂದರೆ ತಂದೊಡ್ಡಿದೆ. ಮಂಗಳೂರಿನಲ್ಲಿ ಒಟ್ಟು 325 ಸಿಟಿ ಬಸ್ ಗಳಲ್ಲಿ ಕೇವಲ 120 ಬಸ್ಸುಗಳ ಮಾತ್ರ ಸಂಚರಿಸುತ್ತಿವೆ. ಉಳಿದ ಬಸ್ ಗಳು ಆಯಾ ಮಾಲೀಕರು ಮತ್ತ ಜಾಗಗಳಲ್ಲಿ ನಿಲ್ಲಿಸಿದ್ದು, ಬಸ್ ಗಳು ಅಲ್ಲಿಯೇ ತುಕ್ಕು ಹಿಡಿಯುತ್ತಿವೆ. ಕೆಲವೊಂದು ಪ್ರದೇಶಗಳಲ್ಲಿ ಹೀಗೆ ನಿಲ್ಲಿಸಿರುವ ಬಸ್ ಗಳಲ್ಲಿ ಬೀದಿ ನಾಯಿಗಳು ವಾಸಿಸುತ್ತಿದ್ದರೆ ಇನ್ನು ಕೆಲವೆಡೆ ನಿಲ್ಲಿಸಿದ ಬಸ್ ನ ಕಂಬಿಗೆ ದನ ಕಟ್ಟುವುದು ನಡೆಯುತ್ತಿದೆ. ಈ ರೀತಿಯ ಪೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.