BELTHANGADI
ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ
ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ
ಬೆಳ್ತಂಗಡಿ,ಅಕ್ಟೋಬರ್ 19: ಅಕ್ಟೋಬರ್ 29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ‌್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್ 29 ರಂದು ನಡೆಯಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಿರುವರು. ಬಳಿಕ ಅವರು ಉಜಿರೆಯಲ್ಲಿ ನಡೆಯಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಧಂತ್ಯುತ್ಸವ ಸಂದರ್ಭ ಕೂಡ ಇದೇ ಆಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಧರ್ಮಸ್ಥಳ ಭೇಟಿ ಅತೀ ಮಹತ್ವಪೂರ್ಣವಾಗಲಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ರೂಪುರೇಷಗಳು ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. ಸ್ವ ಸಹಾಯ ಗುಂಪುಗಳ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂತರಾಷ್ಟ್ರೀಯ ಮಟ್ಟದ ಮನ್ನಣೆಗೂ ಪಾತ್ರವಾಗಿದೆ. ಈ ನಡುವೆ ಅಕ್ಟೋಬರ್ 22 ರಂದು ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಲಾಭಾಂಶ ವಿತರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಲ್ಗೊಳ್ಳಲಿದ್ದಾರೆ.
ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಸೇರಿದಂತೆ ಹಲವು ಕೇಂದ್ರ ಹಾಗೂ ರಾಜ್ಯ ಮಟ್ಟದ ಸಚಿವರು ಹಾಗೂ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ಗಣ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಈ ಹಿಂದೆ ಭಾಗವಹಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.