ಮಳೆಗಾಗಿ ಸರ್ವಧರ್ಮಿಯರಿಂದ ವಿಶೇಷ ಪ್ರಾರ್ಥನೆ

ಮಂಗಳೂರು ಮೇ 15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಡಿಯುವ ನೀರಿನ ಅಭಾವ ತಲೆದೊರಿರುವ ಹಿನ್ನಲೆಯಲ್ಲಿ ಮಳೆಗಾಗಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿಶೇಷ ಪ್ರಾರ್ಥನೆ ನಡೆಯುತ್ತಿದೆ.

ಈಗಾಗಲೇ ದಕ್ಷಿಣ ಕನ್ನಡದಲ್ಲಿ ನೀರಿನ ಕೊರತೆಯುಂಟಾಗಿ ಜನಸಾಮಾನ್ಯರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಬಹಳ ಸಂಕಷ್ಟ ಎದುರಾಗಿದ್ದು ಕುಡಿಯುವ ಮತ್ತು ದಿನ ಬಳಕೆಯ ನೀರಿಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನಲೆಯಲ್ಲಿ ಮಳೆರಾಯನ ಕೃಪೆಗಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಳೆಗಾಗಿ ಸರ್ವಧರ್ಮಿಯರು ಆಯಾ ದಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಕರೆಕೊಟ್ಟಿದ್ದರು.

ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಮುಸ್ಲಿಂ ಭಾಂದವರಿಂದ ಸಾಮೂಹಿಕ ವಿಶೇಷ ನಮಾಝ್ ಮತ್ತು ಪ್ರಾರ್ಥನೆ ಜರುಗಿತು. ಈ ಹಿನ್ನಲೆ ಇಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ನೆಹರೂ ಮೈದಾನದಲ್ಲಿ ಶೇಖ್ ಸಾಕಿಬ್ ಸಲೀಂ ಉಮ್ರಿಯವರ ನೇತೃತ್ವದಲ್ಲಿ ವಿಶೇಷ ನಮಾಝ್ ಮತ್ತು ಖುತುಬಾ ನೆರವೇರಿತು. ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು.