LATEST NEWS
ಉಡುಪಿಯಿಂದ ಮಹಾಕುಂಭಮೇಳಕ್ಕೆ ವಿಶೇಷ ರೈಲು – 15 ನಿಮಿಷದಲ್ಲಿ ಎಲ್ಲಾ ಸೀಟ್ ಬುಕ್

ಉಡುಪಿ ಫೆಬ್ರವರಿ 15: ಫೆಬ್ರವರಿ 17 ರಂದು ಉಡುಪಿಯಿಂದ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವ ವಿಶೇಷ ರೈಲು ಕೇವಲ 15 ನಿಮಿಷದಲ್ಲಿ ಫುಲ್ ಆಗಿದೆ.
ಫೆಬ್ರವರಿ 17 ರಂದು ಮಧ್ಯಾಹ್ನ ಉಡುಪಿಯಿಂದ ಹೊರಡುವ ರೈಲು ಫೆಬ್ರವರಿ 19 ರಂದು ಪ್ರಯಾಗ್ ರಾಜ್ ತಲುಪಲಿದೆ. ಈ ಹಿನ್ನಲೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಇಂದ್ರಾಳಿ ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ ಯಾತ್ರಾರ್ಥಿಗಳು ಕಾದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಬುಕಿಂಗ್ ತೆರೆದು ಕೇವಲ 15 ನಿಮಿಷದಲ್ಲಿ ಎಲ್ಲಾ ಸೀಟ್ ಗಳು ಬರ್ತಿಯಾದವು, ಆದರೆ ರಿಟರ್ನ್ ಟಿಕೆಟ್ ಗೊಂದಲ ವುಂಟಾಗಿತ್ತು, ಅನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೊಂಕಣ್ ರೈಲ್ವೇ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಬೆಳೆಸಿದ ಫಲವಾಗಿ ರಾತ್ರಿ 8 ಗಂಟೆ ಸುಮಾರಿಗೆ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಆ ವೇಳೆಗೆ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್‌ಗಳು ಮುಚ್ಚಿದ್ದವು. ಹೀಗಾಗಿ ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಲೂ ಒಂದಿಷ್ಟು ಮಂದಿ ಗೊಂದಲಕ್ಕೆ ಒಳಗಾಗಿದ್ದರು. ಪ್ರಯಾಗ್ ರಾಜ್‌ಗೆ ಹೋಗಲು ಮುಂಗಡ ಟಿಕೆಟ್ ಕಾದಿರಿಸಿದ್ದ ಹಲವರಿಗೆ ವಾಪಸ್ ಬರಲು ಟಿಕೆಟ್ ಸಿಕ್ಕಿರಲಿಲ್ಲ.
