DAKSHINA KANNADA
ಪ್ರವೀಣ್ ನೆಟ್ಟಾರು ಕೊಲೆ ಹಿಂದೆ ಮಸೂದ್ ಕೊಲೆ ಪ್ರತೀಕಾರ ?
ಪುತ್ತೂರು, ಜುಲೈ 27: ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಇದೀಗ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಒಂದು ವಾರದ ಹಿಂದೆಯಷ್ಟೇ ನಡೆದ ಮಸೂದ್ ಕೊಲೆಗೆ ಸೇಡು ತೀರಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಪ್ರವೀಣ್ ಅವರನ್ನು ಹತ್ಯೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಬೈಕ್ ನಂಬರ್ ಕೇರಳದ ನೋಂದಣಿ ಸಂಖ್ಯೆಯಾಗಿದ್ದವು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆಯಿಂದ ಬೆಳ್ಳಾರೆ ಪರಿಸರದಲ್ಲಿ ಕೇರಳ ನೊಂದಣಿ ಕಾರು ಹಾಗು ಬೈಕ್ ಓಡಾಡುತ್ತಿದ್ದ ಮಾಹಿತಿ ಬಂದಿದ್ದು, ದುಷ್ಕರ್ಮಿಗಳು ನಿನ್ನೆ ಬೆಳಿಗ್ಗೆಯಿಂದಲೇ ಪ್ರವೀಣ್ ಕೊಲೆಗೆ ಸ್ಕಚ್ ಹಾಕುತ್ತಿದ್ಧ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ
ಪ್ರವೀಣ್ ರನ್ನು ಒಂದೇ ದಿನದಲ್ಲಿ ಸ್ಕಚ್ ಹಾಕಿ ಕೊಲೆ ಮಾಡಿರುವ ಸಾಧ್ಯತೆ ಇದ್ದು, ಪ್ರವೀಣ್ ಕೋಳಿ ಅಂಗಡಿಯಲ್ಲಿ ಹೆಚ್ಚಾಗಿ ಅವರ ಪತ್ನಿ ನೂತನ ಕುಳಿತುಕೊಳ್ಳುವುದು ವಾಡಿಕೆ, ಆದರೆ ಜುಲೈ 25 ರಂದು ನೂತನ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ತವರು ಮನೆಗೆ ಹೋಗಿದ್ದರು, ಈ ಕಾರಣಕ್ಕಾಗಿ ಪ್ರವೀಣ್ ಕಳೆದ ಎರಡು ದಿನಗಳಿಂದ ಕೋಳಿ ಅಂಗಡಿಯಲ್ಲಿದ್ದರು. ಉಳಿದ ಸಮಯದಲ್ಲಿ ತನ್ನದೇ ಕಾರಿನಲ್ಲಿ ಪ್ರವೀಣ್ ಬಾಡಿಗೆ ಹೋಗುತ್ತಿದ್ದರು.
ಪ್ರವೀಣ್ ಗೆ ಇಬ್ಬರು ಅಕ್ಕಂದಿರು, ಒಬ್ಬಳು ತಂಗಿ ಇದ್ದು, ತಂದೆ ಶೇಖರ ಪೂಜಾರಿ ಮತ್ತು ತಾಯಿ ರತ್ನಾವತಿ ಜೊತೆ ಪ್ರವೀಣ್ ಜೀವನ ಸಾಗಿಸುತ್ತಿದ್ದರು. ಪ್ರವೀಣ್ ಮನೆ ಪಕ್ಕದಲ್ಲೇ ಅಂತಿಮ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ.
ಸತ್ತಾಗ ಯಾರೂ ಬರುವುದಿಲ್ಲ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಹಾಗು ರಾಜಕೀಯ ವ್ಯವಸ್ಥೆಯ ವಿರುದ್ಧ ಪ್ರವೀಣ್ ಮಾವ ಲೋಕೇಶ್ ಪೂಜಾರಿ ಕಿಡಿ ಕಾರಿದ್ದಾರೆ. ರಾಜಕೀಯಕ್ಕಾಗಿ ನಮ್ಮವನನ್ನು ಕಳೆದುಕೊಂಡೆವು, ಸತ್ತಾಗ ಯಾರೂ ಬರುವುದಿಲ್ಲ, ಪ್ರವೀಣ್ ಸಾವಿಗೀಡಾದ ಬಳಿಕ ಯಾವ ಮಂತ್ರಿಗೂ ಪ್ರವೀಣ್ ಮನೆಗೆ ಬರುವ ಟೈಂ ಇಲ್ಲ, ರಾಜಕೀಯಕ್ಕೋಸ್ಕರ ಬಡ ಕುಟುಂಬದ ಮಕ್ಕಳು ಬಲಿಯಾಗುತ್ತಿದ್ದಾರೆ. ಊರಿಗೆ ಉಪಕಾರಿಯಾಗಿದ್ದ ಪ್ರವೀಣ್ ಊರಿನಲ್ಲಿ ಯಾರಿಗೆ ಅನಾರೋಗ್ಯ ಕಾಡಿದರೂ ತನ್ನ ಕಾರಿನಲ್ಲೇ ಆಸ್ಪತ್ರೆ ಸೇರಿಸುತ್ತಿದ್ದ ಪರೋಪಕಾರಿಯಾಗಿದ್ದ, ಪ್ರವೀಣ್ ಕೊಲೆಗಡುಕರಿಗೆ ತಕ್ಕ ಶಿಕ್ಷೆಯಾಗಬೇಕು. ಅವರನ್ನು ಯಾವ ಕಾರಣಕ್ಕೂ ಸುಮ್ಮನೆ ಬಿಡಬಾರದು, ಮುಂದೆ ಇಂಥ ಪರಿಸ್ಥಿತಿ ಬಡ ಮಕ್ಕಳಿಗೆ ಬರಬಾರದು ಎಂದು ಪ್ರವೀಣ್ ಮಾವ ಲೋಕೇಶ್ ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗಾಂಜಾ ಮಾಫಿಯಾ್ ಕೈವಾಡ?
ಪ್ರವೀಣ್ ಕೊಲೆ ಹಿಂದೆ ಗಾಂಜಾ ಮಾಫಿಯಾ್ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಬೆಳ್ಳಾರೆಯ ಕಳಂಜ ಪರಿಸರದಲ್ಲಿ ಹೆಚ್ಚಾಗಿದ್ದ ಗಾಂಜಾ ವ್ಯವಹಾರ ನಡೆಯುತ್ತಿದ್ದು, ಇದೇ ವಿಚಾರಕ್ಕೆ ವಾರದ ಹಿಂದೆ ಕೊಲೆಯಾದ ಮಸೂದ್ ನ ಜೊತೆ ಗಲಾಟೆ ಮಾಡಿಕೊಂಡಿದ್ದ ಮಸೂದ್ ಕೊಲೆಗಾರರು.
ಕಳಂಜ ಪರಿಸರದಲ್ಲಿ ಗಾಂಜಾ ಮಾಫಿಯಾದ ಬಗ್ಗೆ ಪೋಲೀಸರಿಗೂ ಮಾಹಿತಿ ಇತ್ತು, ಗಾಂಜಾ ವ್ಯವಹಾರ ಕಂಟ್ರೋಲ್ ಮಾಡುತ್ತಿದ್ದರೆ ಎರಡೂ ಕೊಲೆಗಳು ನಡೆಯುತ್ತಿರಲಿಲ್ಲ ಎನ್ನುವುದು ಸ್ಥಳೀಯರವಾದವಾಗಿದೆ.
ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರುವ ಪ್ರವೀಣ್ ರ ಅಂತಿಮ ಯಾತ್ರೆಯನ್ನು ಬೆಳಿಗ್ಗೆ ಸುಮಾರು 9.30 ಕ್ಕೆ ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಸಿದ್ಧತೆ ನಡೆದಿದೆ. ಸರಕಾರಿ ಆಸ್ಪತ್ರೆಯಿಂದ ದರ್ಬೆ ಸರ್ಕಲ್ ಮೂಲಕ ಬೆಳ್ಳಾರೆ ಸೇರಲಿರುವ ಮೃತದೇಹ ದರ್ಬೆ-ಸವಣೂರು-ಕಾಣಿಯೂರು-ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆ ಸಾಗಿಸಲು ಸಿದ್ಧತೆ ನಡೆದಿದೆ.