DAKSHINA KANNADA
ಪ್ರವೀಣ್ ನೆಟ್ಟಾರು ಹತ್ಯೆ: ಮೂವರು ಪ್ರಮುಖ ಆರೋಪಿಗಳ ಬಂಧನ, ಗೌಪ್ಯ ಸ್ಥಳದಲ್ಲಿ ವಿಚಾರಣೆ

ಪುತ್ತೂರು, ಆಗಸ್ಟ್ 11: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶಿಯಾಬ್, ಬಶೀರ್, ರಿಯಾಝ್ ಎಂದು ಗುರುತಿಸಲಾಗಿದೆ. ಈ ಮೂವರನ್ನು ವಿಶೇಷ ತನಿಖಾ ತಂಡ ಕೇರಳದಲ್ಲಿ ಬಂಧಿಸಿದ್ದು, ಈಗಾಗಲೇ ಸ್ಥಳ ಮಹಜರು ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಒಟ್ಟು 7 ಜನರನ್ನು ಬಂಧಿಸಿದ್ದರು. ಅವರು ಪ್ರವೀಣ್ ನೆಟ್ಟಾರು ಚಲನವಲನ, ಕೃತ್ಯಕ್ಕೆ ಬೈಕ್ ನೀಡಿದ್ದು ಸೇರಿದಂತೆ ಆರೋಪಿಗಳಿಗೆ ಆಶ್ರಯ ನೀಡಿದ್ದರ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಇದೀಗ ಬಂಧಿತ ಮೂವರು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಇವರೂ ಕೂಡಾ ಉಳಿದವರಂತೆ ಸ್ಥಳೀಯರೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸದ್ಯ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ನಿನ್ನೆ ಹಾಸನ, ಚಿಕ್ಕಮಗಳೂರು ಸೇರಿದಂತೆ ಒಟ್ಟು 6 ಜಿಲ್ಲೆಗಳ ಎಸ್ಪಿಗಳ ಸಭೆಯನ್ನು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನಡೆಸಿದ್ದರು.
ಈ ಬಗ್ಗೆ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 26 ರಂದು ಪ್ರವೀಣ್ ನೆಟ್ಟಾರುವನ್ನು ಬರ್ಬರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು, ಇದೀಗ ಆರೋಪಿಗಳನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಗೌಪ್ಯ ಸ್ಥಳದಲ್ಲಿರಿಸಿ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.