LATEST NEWS
ನಾನು ರೀಲ್ ನಾಗವಲ್ಲಿ ಅಲ್ಲ ರಿಯಲ್ ನಾಗವಲ್ಲಿ…ಪ್ರತಿಭಾ ಕುಳಾಯಿ…!!
ಮಂಗಳೂರು ಅಕ್ಟೋಬರ್ 21: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ವಾರ್ನಿಂಗ್ ಕೊಟ್ಟಿದ್ದು, ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ ಜಾಲತಾಣದಲ್ಲಿ ತೇಜೋವಧೆ ಮಾಡುವುದನ್ನು ಖಂಡಿಸಿದ್ದಾರೆ. ‘ನನ್ನನ್ನು ನಾಗವಲ್ಲಿ ಅಂತ ಟ್ರೋಲ್ ಮಾಡುತ್ತಿದ್ದಾರೆ. ನಾನು ಆ ಸಿನಿಮಾದಲ್ಲಿರುವ ನಾಗವಲ್ಲಿ ಅಲ್ಲ. ನಾನು ಒರಿಜಿನಲ್ ನಾಗವಲ್ಲಿ. ಈ ಟ್ರೋಲ್ನ್ನು ರಾಜಕೀಯ ಬೆಳವಣಿಗೆಗೆ ಪೂರಕ ಅಂತ ನಾನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ. ‘ನಾನು ರಾಣಿ ಅಬ್ಬಕ್ಕನ ಊರಿನಲ್ಲಿ ಹುಟ್ಟಿದವಳು. ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಧೈರ್ಯಕ್ಕೆ ಮುಖ್ಯವಾದ ಕಾರಣ ನನ್ನ ವಿದ್ಯೆ. ಟೋಲ್ಗೇಟ್ ವಿರೋಧಿ ಹೋರಾಟದಲ್ಲಿ ನಾನು ಇನ್ನು ಮುಂದೆ ಕೂಡಾ ಭಾಗವಹಿಸುತ್ತೇನೆ. ಏಕೆಂದರೆ ಇದು ಲಂಚ ಮಂಚದ ವಿಷಯ ಅಲ್ಲ. ಬಿಜೆಪಿ ನಾಯಕರ ವೀಡಿಯೋ ವೈರಲ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ.
ಯಾರೋ ಟ್ರೋಲ್ ಮಾಡಿ ಇದು ಕಾಂತಾರ 2 ಅಂತ ಹೇಳಿದ್ದಾರೆ. ನಾನು ಹೇಳ್ತೇನೆ ಇದು ಕಾಂತಾರ 2 ಅಲ್ಲ. ಕಾಂತಾರ 3. ಕಾಂತಾರ 1 ಆದದ್ದು ಕೋಡಿಕೆರೆಯ ಗೂಂಡಾಗಳನ್ನು 8ವರ್ಷಗಳ ಹಿಂದೆ ಮಟ್ಟ ಹಾಕಿದ್ದಾಗ. ಕಾಂತಾರ 2-ಅಬ್ದುಲ್ ಸತ್ತಾರ್ ಎನ್ನುವ ಕಾಮುಕ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾಗ ಅವನಿಗೆ ಹೊಡೆದಿದ್ದಾಗ. ಈ ಹೋರಾಟದಲ್ಲಿ ನಾನು ಭಾಗವಹಿಸಿದ್ದು ಕಾಂತಾರ 3. ಇನ್ನು ಮುಂದೆ ಕಾಂತಾರ 4 ಯಾವುದು ಕೇಳಿದ್ರೆ ಸುರತ್ಕಲ್ನಲ್ಲಿ ಬೆಳೆದು ನಿಂತಿರುವ ಬೃಹತ್ ಕಟ್ಟಡ. ಕಾಂತಾರ 5 MRPLನಲ್ಲಿ ನಮ್ಮ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಅದರ ವಿರುದ್ದ ಹೋರಾಟ ಎಂದರು.
ಇನ್ನೊಮ್ಮೆ ನಾನು ನಾಗವಲ್ಲಿಯ ರೂಪ ತಾಳುತ್ತೇನೆ. ಬಿಜೆಪಿಯವರು ಮಾತೆತ್ತಿದ್ರೆ ಧರ್ಮ, ಹೆಣ್ಣು ಮಕ್ಕಳು ಗೌರವ ಅಂತಾರಲ್ವಾ. ಅವರ ಸಂಸ್ಕೃತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಎದ್ದು ಕಾಣುತ್ತಿದೆ. ಹೆಣ್ಣು ಮಕ್ಕಳಿಗೆ ಕಾಳಿ ದೇವಿ ಎಂಬ ಎರಡು ರೂಪವಿದೆ. ನಾನು ಆ ಹೋರಾಟದಲ್ಲಿ ಯಾವುದೇ ಬಿಜೆಪಿ ಮುಖಂಡರಿಗೆ ಧಿಕ್ಕಾರ ಕೂಗಲಿಲ್ಲ. ಹತ್ತಾರು ಮಂದಿ ಪೊಲೀಸರು ಬಂದು ನನ್ನ ಹಿಡಿದಾಗ ಮಾನಕ್ಕೆ ಹೆದರಿ ನಾನು ಕಿರುಚಿದ್ದೇನೆಯೇ ಹೊರತು ಇನ್ನ್ಯಾವುದಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಟ್ರೋಲ್ ಮಾಡಿದವನ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಹಕ್ಕಿದೆ ಎಂದರು.