KARNATAKA
ಪ್ರತಾಪ್ ಸಿಂಹ ಈ ಸಲ ಟಿಕೆಟ್ ಕೈತಪ್ಪುವುದು ಖಾತರಿ..!? ಮಧ್ಯರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ಜನತೆಗೆ ಥ್ಯಾಂಕ್ಸ್ ಅಂದ ಸಂಸದ..!
ಮೈಸೂರು : ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಯಾರಿಗೆ ಉಂಟು ಯಾರಿಗಿಲ್ಲ ಹೇಳಲಿಕ್ಕೆ ಅಸಾಧ್ಯವಾಗಿದ್ದು, ಅನೇಕ ಘಟಾನುಘಟಿಗಳ ಕೈತಪ್ಪುವ ಆತಂಕ ಎದುರಾಗಿದೆ. ಇದರಲ್ಲಿ ಮೈಸೂರು ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಬ್ಬರಾಗಿದ್ದಾರೆ. ಸೋಮವಾರ ತಡರಾತ್ರಿ ಏಕಾಏಕಿ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಕ್ಷೇತ್ರದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ.
ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ ಎಂದು ಭಾವುಕರಾಗಿ ಹೇಳಿರುವುದು ಬಹುತೇಕ ಅವರ ವಿದಾಯ ಭಾಷಣ ಎನ್ನಲಾಗುತ್ತಿದೆ. ಸ್ವಾರ್ಥಕ್ಕಾಗಿ ಯಾರ ಮನೆ ಬಾಗಿಲನ್ನೂ ನಾನು ತಟ್ಟಿಲ್ಲ. ಟಿಕೆಟ್ ಸಿಗುತ್ತೋ, ಸಿಗಲ್ವೋ ಚಾಮುಂಡಿ ನಿರ್ಧರಿಸುತ್ತಾಳೆ. ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದ ಸಿಂಹ, 10 ವರ್ಷಗಳ ರಾಜಕಾರಣದ ಬಗ್ಗೆ ಸುದೀರ್ಘ ಮಾತುಗಳನ್ನಾಡಿದ್ದಾರೆ. ಮಡಿಕೇರಿಯ ಜನರು ನೇರ ಹಾಗೂ ನಿಷ್ಠುರವಾದಿಗಳು. ಆದರೆ ಮೈಸೂರು ಜನ ರಾಜಕಾರಣ ಮಾಡುವವರು. ಮೈಸೂರಿನಲ್ಲಿರುವಷ್ಟು ರಾಜಕಾರಣ ಎಲ್ಲಿಯೂ ಇಲ್ಲ. ಜನರ ಮಧ್ಯೆ ಇರುವವರಿಗೆ ಪಕ್ಷ ಟಿಕೆಟ್ ನೀಡಬೇಕು. ನನ್ನಿಂದ ಯಾರೂ ಸೋತಿಲ್ಲ. ನನ್ನ ವಿರುದ್ಧ ಏಕೆ ಇಲ್ಲಸಲ್ಲದ ಆರೋಪ ಮಾಡುತ್ತೀರಿ? ನನ್ನ ಕ್ಷೇತ್ರದಾಚೆಗೂ ಜನ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಈಗಲೂ ಪಕ್ಷ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ. ಪ್ರಧಾನಿ ಮೋದಿ ಇರುವವರೆಗೂ ಇರುತ್ತೇನೆ ಎಂದು ಹೇಳಿದ್ದೆ. ನನ್ನಂಥ ವ್ಯಕ್ತಿಗೆ ಟಿಕೆಟ್ ಕೊಡಬೇಕೆಂದು ನಿರೀಕ್ಷಿಸಿದ್ದೆ. ಆದರೆ ರಾಜಕಾರಣದಲ್ಲಿ ಏನಾದರೂ ಆಗಬಹುದು. ಮೋದಿಯಂಥ ಮೋದಿಯೇ ಗೌಣವಾಗಿದ್ದರು. ಸೂರ್ಯನಿಗೇ ಗ್ರಹಣ ಬಡಿಯುತ್ತದೆ, ಇನ್ನು ನಾನ್ಯಾರು? ನಾನು ಈಗ ಎಂಪಿ ಆಗಿದ್ದೀನಿ, ಎಂಪಿ ಆಗಿಯೇ ಸಾಯುವುದಿಲ್ಲ. ನನ್ನ ನಸೀಬು ಕೆಟ್ಟು ಏನು ಬೇಕಾದರೂ ಆಗಬಹುದು. 10 ವರ್ಷ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.