UDUPI
ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ :ಸಚಿವ ಮಧ್ವರಾಜ್
ಉಡುಪಿ,ಆಗಸ್ಟ್ 26:ಜಿಲ್ಲೆಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲು ಮಂಜೂರಾತಿಯನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಮಂಗಳವಾರ, ಉಡುಪಿಯ ಪುರಭವನದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ದೈಹಿಕ ಶಿಕ್ಷಣ ವಿಭಾಗ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ, ಲಯನ್ಸ್ ಕ್ಲಬ್ ಪರ್ಕಳ ಹಾಗೂ ಉಡುಪಿ ಜಿಲ್ಲಾ ವಿವಿಧ ಕ್ರೀಡಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಬಜೆಟ್‍ನಲ್ಲಿ ತಲಾ 2 ಕೋಟಿ ರೂ. ಗಳ ವೆಚ್ಚದಲ್ಲಿ ರಾಜ್ಯದಲ್ಲಿ 2 ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಲು ಘೋಷಿಸಿದ್ದು, ಬೆಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲು ಈಗಾಗಲೇ ಮಂಜೂರಾತಿಯನ್ನು ನೀಡಿದ್ದು, ಈ ಕೇಂದ್ರದಲ್ಲಿ ಕ್ರೀಡಾಪಟುಗಳಿಗೆ ಅಗತ್ಯವಾದ ಪೌಷ್ಠಿಕ ಆಹಾರದ ತಯಾರಿ, ಅಗತ್ಯ ಔಷಧಗಳ ಸಂಶೋಧನೆ, ಗಾಯಗೊಂಡ ಕ್ರೀಡಾಪಟುಗಳಿಗೆ ನೀಡಬೇಕಾದ ಚಿಕಿತ್ಸೆ, ಪುರ್ನವಸತಿ, ಹಾಗೂ ವೈಜ್ಞಾನಿಕ ರೀತಿಯಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ಉತ್ತಮಪಡಿಸಲು ಅಗತ್ಯವಿರುವ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಈ ಬಾರಿಯ ಬಜೆಟ್‍ನಲ್ಲಿ ಕ್ರೀಡಾ ಇಲಾಖೆಗೆ 285 ಕೋಟಿ ಮೀಸಲಿಟ್ಟಿದ್ದು, ಮಹಿಳಾ ಕ್ರೀಡಾಪಟುಗಳಿಗಾಗಿ ಉಡುಪಿ ಸೇರಿದಂತೆ ರಾಜ್ಯದ 4 ಕಡೆಗಳಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಕ್ರೀಡಾ ಹಾಸ್ಟೆಲ್‍ಗಳನ್ನು ನಿರ್ಮಾಣ ಮಾಡಲಾಗುವುದು, ಅಂತಾರಾಷ್ಟ್ರೀಯ ಗುಣಮಟ್ಟದ 2 ಅತ್ಯಾಧುನಿಕ ಜಿಮ್‍ಗಳನ್ನು ಉಡುಪಿ ಮತ್ತು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗುವುದು ಎಂದ ಸಚಿವರು, ರಾಜ್ಯದ 14 ಈಜುಕೊಳಗಳ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿತ್ತು, ಅದನ್ನು ಇಲಾಖೆಯ ವಶಕ್ಕೆ ಪಡೆದ ನಂತರ 2 ತಿಂಗಳಲ್ಲಿ 67 ಲಕ್ಷ ಆದಾಯ ಬಂದಿದೆ ಹಾಗೂ ರಾಜ್ಯದ ಎಲ್ಲಾ ಕ್ರೀಡಾ ಹಾಸ್ಟೆಲ್‍ಗಳಲ್ಲಿನ ಆಹಾರ ಪೂರೈಕೆಯನ್ನು ಖಾಸಗಿಯವರಿಂದ ಇಲಾಖೆಯ ವಶಕ್ಕೆ ಪಡೆದಿದ್ದು, ಕ್ರೀಡಾಪಟುಗಳಿಗೆ ಪ್ರತಿದಿನ ನಿಗಧಿಪಡಿಸಿದ ಪ್ರಮಾಣದಲ್ಲಿ ಪೌಷ್ಠಿಕಾಂಶದಿಂದ ಕೂಡಿದ ಆಹಾರ ವ್ಯವಸ್ಥೆ ಮಾಡಲಾಗಿದೆ, ಇದರಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ದೂರು ನೀಡಲು ಅನುಕೂಲವಾಗುವಂತೆ ತಾವು ಸೇರಿದಂತೆ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಹಾಸ್ಟೆಲ್‍ಗಳಲ್ಲಿ ನಮೂದಿಸಲಾಗಿದೆ, ರಾಜ್ಯದ ಸಾಧನೆ ಮಾಡಿದ ಕ್ರೀಡಾಪಟುಗಳ ಜೊತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಕ್ರೀಡಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಿದ್ದು, ಈ ವರ್ಷದಿಂದ ರಾಜ್ಯದ 10 ಕ್ರೀಡಾ ಸಂಸ್ಥೆಗಳಿಗೆ 5 ಲಕ್ಷ ರೂ ಗಳ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಅರ್ಹ ಸಂಸ್ಥೆಗಳು ಅರ್ಜಿ ಸಲ್ಲಿಸುವಂತೆ ಸಚಿವರು ಹೇಳಿದರು.
ಉಡುಪಿಯಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಲಾನ್ ಟೆನಿಸ್ ಕೋರ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ನೇಜಾರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ 8 ಕೋಟಿ ರೂ ವೆಚ್ಚದ ಈಜುಕೊಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ, ಬ್ರಹ್ಮಾವರದಲ್ಲಿ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 6.5 ಎಕ್ರೆ ಭೂಮಿ ಗುರುತಿಸಲಾಗಿದೆ, 2 ಕೋಟಿ ವೆಚ್ಚದಲ್ಲಿ ಅಥ್ಲೆಟಿಕ್ ಅಕಾಡೆಮಿ ಹಾಗೂ 1 ಕೋಟಿ ವೆಚ್ಚದಲ್ಲಿ ಈಜು ಅಕಾಡೆಮಿ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಪಡೆದ ಜಿಲ್ಲೆಯ ಕ್ರೀಡಾಪಟುಗಳಾದ ಪ್ರಜ್ಞಾ ಕೆ ಹಾಗೂ ಅಫ್ರಿದ್ ಅವರನ್ನು ಸನ್ಮಾನಿಸಲಾಯಿತು.
ನಮ್ಮೂರ ಶಾಲೆ ನಮ್ಮೂರ ಯುವಜನತೆ ಕಾಯ್ರಕಮದಲ್ಲಿ ಸಾಧನೆ ತೋರಿದ 3 ಶಾಲೆಗಳಿಗೆ ತಲಾ 90000 ಸಾವಿರ ಮತ್ತು ಆ ಶಾಲೆಗಳ ಕ್ರೀಡಾ ಶಿಕ್ಷಕರಿಗೆ 10000 ಗಳ ಬಹುಮಾನ ವಿತರಿಸಲಾಯಿತು. ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಿದ 15 ಯುವಕ ಯುವತಿ ಮಂಡಳಗಳಿಗೆ ಒಟ್ಟು 4.5 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, .ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ್ ರಾವ್, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಹಾಗೂ ಜಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.