DAKSHINA KANNADA
ಕೇರಳದ ಮಾಂಸದ ತ್ಯಾಜ್ಯ ಕರ್ನಾಟಕ ಎಸೆಯುತ್ತಿದ್ದ ಜಾಲ ಪತ್ತೆ

ಕೇರಳದ ಮಾಂಸದ ತ್ಯಾಜ್ಯ ಕರ್ನಾಟಕ ಎಸೆಯುತ್ತಿದ್ದ ಜಾಲ ಪತ್ತೆ
ವಿಟ್ಲ ಜುಲೈ 13: ಕೇರಳದ ಕ್ಯಾಲಿಕಟ್ ನಿಂದ ಕೋಳಿ ತ್ಯಾಜ್ಯ ಮತ್ತು ಇತರ ಮಾಂಸ ತ್ಯಾಜ್ಯಗಳನ್ನು ಕರ್ನಾಟಕದ ಪ್ರದೇಶದಲ್ಲಿ ಸುರಿಯುವ ಮಾಫಿಯಾವೊಂದನ್ನು ಪುತ್ತೂರಿನಲ್ಲಿ ಪತ್ತೆ ಹಚ್ಚಲಾಗಿದೆ.
ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಟನ್ ಗಟ್ಟಲೆ ಕೋಳಿ ತ್ಯಾಜ್ಯ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ಸುರಿದು ಹೋಗುವ ತಂಡವೊಂದನ್ನು ಪುತ್ತೂರಿನ ಇರ್ದೆ ಗ್ರಾಮಸ್ತರು ಮತ್ತು ಪಂಚಾಯತ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ತಂಡ ಕೇರಳದಿಂದ ತ್ಯಾಜ್ಯವನ್ನು ತಂದು ಕರ್ನಾಟಕದ ಹೆದ್ದಾರಿ ಬದಿಯಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ವಿಚಾರವನ್ನು ಕಿಡಿಗೇಡಿಗಳು ಬಾಯ್ಬಿಟ್ಟಿದ್ದಾರೆ.
ಕರ್ನಾಟಕದಿಂದ ಮಾಂಸದ ಕೋಳಿಗಳನ್ನು ಕೇರಳಕ್ಕೆ ಸಾಗಿಲಿ ಅಲ್ಲಿಂದ ತ್ಯಾಜ್ಯವನ್ನು ಗಡಿ ಪ್ರದೇಶದಲ್ಲಿ ಎಸೆಯುವ ಬಗ್ಗೆ ಹಲವು ಸಮಯದಿಂದ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ದೂರು ನೀಡಿದ್ದರು. ಲೋಡುಗಟ್ಟಲೆ ಕೊಳೆತ ತ್ಯಾಜ್ಯ ದುರ್ನಾತ, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದ್ದು, ಗ್ರಾಮ ಪಂಚಾಯತ್ ಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ವಿಲೇವಾರಿ ಮಾಡುತ್ತಿದ್ದರು.
ಕೇರಳದಿಂದ ಮಾಂಸದ ತ್ಯಾಜ್ಯ ಎಸೆಯಲು ಬಂದ ಲಾರಿ ಇರ್ದೆಯಲ್ಲಿ ಕೆಸರಿನಲ್ಲಿ ಹೂತು ಹೋಗಿದ್ದ ಕಾರಣ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇರ್ದೆಯಲ್ಲಿ ಲಾರಿಯಿಂದ ಮಾಂಸದ ತ್ಯಾಜ್ಯವನ್ನು ಇಳಿಸುವ ಸಂದರ್ಭದಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಇಳಿಸಿದ್ದ ತ್ಯಾಜ್ಯವನ್ನು ಮತ್ತೆ ಲಾರಿಗೆ ಆರೋಪಿಗಳಿಂದಲೇ ತುಂಬಿಸಿದ್ದರು. ಕೊನೆಗೆ ರಾತ್ರಿ ಪುತ್ತೂರು ಪುರಸಭೆಯ ಡಂಪಿಂಗ್ ಯಾರ್ಡ್ ಗೆ ಭಾರಿ ಮೊತ್ತ ಪಾವತಿಸಿ ಲಾರಿ ಖಾಲಿಗೊಳಿಸಲಾಯಿತು.