DAKSHINA KANNADA
ಅಪ್ರಾಪ್ತ ಬಾಲಕಿಯ ಲೈಂಗಿಕವಾಗಿ ಬಳಸಿಕೊಂಡು..ಗರ್ಭಿಣಿಯಾಗಿಸಿದ ಆರೋಪಿ ಪೊಲೀಸ್ ವಶಕ್ಕೆ

ಕಡಬ ನವೆಂಬರ್ 11: ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಸಂಬಂಧಿಕ ಆಕೆ ಗರ್ಭಿಣಿಯಾದ ಬಳಿಕ ಆಕೆಯನ್ನು ಬೆದರಿಸಿದ ಆರೋಪದ ಮೇಲೆ ಬಾಲಕಿಯ ಸಂಬಂಧಿಕನೋರ್ವನನ್ನು ಪೋಕ್ಸೋ ಕಾಯ್ದೆಯಡಿ ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಪಾಜೋವು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. 2020ರ ಏಪ್ರಿಲ್ ತಿಂಗಳಿನಿಂದ ಪಾಜೋವು ನಿವಾಸಿ ರಮೇಶ್ ಆಗಾಗ ಬಾಲಕಿಯ ಮನೆಗೆ ಬಂದು ಬಾಲಕಿಯ ಮೇಲೆ ಬಲತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಆರೋಪಿ ರಮೇಶ್ ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದರಿಂದ ಈ ವಿಚಾರವನ್ನು ಬಾಲಕಿ ಯಾರಿಗೂ ತಿಳಿಸಿರಲಿಲ್ಲ ಎಂದು ತಿಳಿದು ಬಂದಿದೆ. ಬಾಲಕಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದು ತಪಾಸಣೆಗಾಗಿ ತನ್ನ ಅಜ್ಜಿಯೊಂದಿಗೆ ಕಡಬ ಸಮುದಾಯ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿಯಾಗಿರುವ ವಿಚಾರ ವೈದ್ಯರಿಂದ ತಿಳಿದ ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿ ಅಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಒಂದೂವರೆ ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ. ಬಳಿಕ ಪಾಜೋವು ನಿವಾಸಿ ರಮೇಶ್ ವಿರುದ್ಧ ಬಾಲಕಿ ದೂರು ನೀಡಿದ್ದು, ಕಡಬ ಪೋಲಿಸರು ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.