FILM
ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸ್ಯಾನ್ ರೆಚಲ್

ಪಾಂಡಿಚೇರಿ ಜುಲೈ 14: ತನ್ನ ದೇಹದ ಬಣ್ಣಕ್ಕೆ ಸಂಬಂಧಿಸಿದ ಅವಹೇಳನವನ್ನು ಧೈರ್ಯವಾಗಿ ಎದುರಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಮಿಸ್ ಪುದುಚೆರಿ ಖ್ಯಾತಿಯ ಮಾಡೆಲ್ ಸೋಶಿಯಲ್ ಮೀಡಿಯಾ ಸ್ಟಾರ್ ಸ್ಯಾನ್ ರೆಚಲ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರೇಚೆಲ್ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಜುಲೈ 5 ರಂದು ಪುದುಚೇರಿ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಆಸ್ಪತ್ರೆಯಿಂದ ಆಕೆ ಯಾರಿಗೂ ಹೇಳದೆ ಪರಾರಿಯಾಗಿದ್ದರು, ಕೆಲವು ದಿನಗಳ ನಂತರ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ಮತ್ತು ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

ಆರ್ಥಿಕ ಒತ್ತಡ ಮತ್ತು ವೈಯಕ್ತಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಸ್ಯಾನ್ ರೆಚಲ್ ಡೆತ್ ನೋಟ್‌ನಲ್ಲಿ ಆಕೆಯ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಸದ್ಯ ಡೆತ್ ನೋಟ್ ವಶಪಡಿಸಿಕೊಂಡ ಪೊಲೀಸರು ಆಕೆಯ ವೈವಾಹಿಕ ಜೀವನದ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಸ್ಯಾನ್ ರೆಚಲ್ ತನ್ನ ತಂದೆಯ ಪ್ರೋತ್ಸಾಹದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು, ಆದರೆ ಆರಂಭದಲ್ಲಿ ಆಕೆಯ ದೇಹದ ಬಣ್ಣಕ್ಕೆ ಅವಮಾನ ಅನುಭವಿಸಿದ್ದರು. ಆದರೂ ಛಲಬಿಡದೆ ಈಕೆ ಅನೇಕ ಸವಾಲುಗಳನ್ನು ಎದುರಿಸಿ ಮಾಡೆಲ್ ಆಗಿ ಯಶಸ್ವಿಯಾದರು. ಕೆಲವು ತಿಂಗಳ ಹಿಂದೆ, ಅವರು ವಿವಾಹವಾಗಿದ್ದರು. ಲಂಡನ್, ಜರ್ಮನಿ ಮತ್ತು ಫ್ರಾನ್ಸ್ನಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ರೆಚಲ್, ತಮ್ಮ ಸಾಧನೆಗಳ ಮೂಲಕ ಯುವತಿಯರಿಗೆ ಸ್ಫೂರ್ತಿಯಾಗಿದ್ದರು. ಸ್ಯಾನ್ ರೆಚಲ್ ಕೇವಲ ಮಾಡೆಲಿಂಗ್ ಲೋಕದಲ್ಲಿ ಮಿಂಚಿದ್ದಲ್ಲದೇ ವರ್ಣಭೇದ ನೀತಿಯನ್ನು ಪ್ರಶ್ನಿಸಿ, ಮಹಿಳಾ ಸುರಕ್ಷತೆಗಾಗಿ ಹೋರಾಡಿದ್ದರು.
2020ರಲ್ಲಿ ಮಿಸ್ ಪುದುಚೇರಿ, 2019ರಲ್ಲಿ ಮಿಸ್ ಬೆಸ್ಟ್ ಆಟಿಟ್ಯೂಡ್, 2019ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಮತ್ತು 2022 ರಲ್ಲಿ ಕ್ವೀನ್ ಆಫ್ ಮದ್ರಾಸ್ ಖ್ಯಾತಿಗಳನ್ನು ಗಳಿಸಿದ್ದ ರೆಚಲ್, 2023ರಲ್ಲಿ ಮಿಸ್ ಆಫ್ರಿಕಾ ಗೋಲ್ಡನ್ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್-ಅಪ್ ಆಗಿ ಸ್ಯಾನ್ ರೆಚಲ್ ಮಿಂಚಿದ್ದರು