ಜನಾರ್ಧನ ಪೂಜಾರಿ ಎನ್ ಕೌಂಟರ್ ಬೆದರಿಕೆ ಒಡ್ಡಿದ್ದ ಆರೋಪಿ ಬಂಧನ

ಮಂಗಳೂರು, ಮಾರ್ಚ್ 19: ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರನ್ನು ಏನ್ ಕೌಂಟರ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುತ್ತೂರು ಮುಕ್ವೆ ನಿವಾಸಿ ಹಕೀಮ್ ಎಂದು ಗುರುತಿಸಲಾಗಿದೆ.ಈತ ಸೌದ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಇಂದು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಹಿಂತಿರುಗುತ್ತಿದ್ದ ಸಂದರ್ಭ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೇಸ ಮುಖಂಡ ಜನಾರ್ದನ ಪೂಜಾರಿ ಅವರು ಕಾರ್ಯಕ್ರಮದಲ್ಲ ಒಂದರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಯಾರೂ ತಡೆ ಒಡ್ಡ ಬಾರದು ಎಂದು ಹೇಳಿದ್ದರು ರಾಮ ಮಂದಿರ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ನಂಬಿಕೆಯ ಕ್ಷೇತ್ರವಾಗಿದೆ ಎಂದು ಹೇಳಿದ್ದರು.

ಪೂಜಾರಿಯವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತ ಎಂದು ತನ್ನನು ತಾನು ಪರಿಚಯಿಸಿ ಕೊಂಡಿದ್ದ ಯುವಕನೊಬ್ಬ ಪೂಜಾರಿಯನ್ನು ಏನ್ ಕೌಂಟರ್ ಮಾಡಿ ಕೊಲ್ಲಬೇಕು ಎಂಬ ಹೇಳಿಕೆಯೊಂದನ್ನು ದ್ವನಿ ಮುದ್ರಿಸಿ ವಾಟ್ಯಾಪ್ ನಲ್ಲಿ ಹಂಚಿದ್ದ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಜನಾರ್ದನ ಪೂಜಾರಿಯವರಿಗೆ ಜೀವ ಬೆದರಿಕೆ ಒಡ್ಡಿದವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಜೆ. ಆರ್. ಲೋಬೋ ಸೇರಿದಂತೆ ಹಲವು ಮಂದಿ ದೂರು ನೀಡಿದ್ದರು.

ಈ ಆಡಿಯೋ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಹಾಳು ಮಾಡುವ ಮತ್ತು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ ಪ್ರಯತ್ನವೆಂದು ದೂರಿನಲ್ಲಿ ತಿಳಿಸಲಾಗಿತ್ತು . ಜನಾರ್ದನ ಪೂಜಾರಿ ಅವರನ್ನು ದೇಶದ್ರೋಹಿ ಎಂದು ಈ ಅಡಿಯೋದಲ್ಲಿ ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಆಡಿಯೋ ಮುದ್ರಿಸಿದ ಅಪರಿಚಿತನ ವಿರುದ್ಧ ಸೈಬರ್ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳನ್ನು ದಾಖಲಿಸಲಾಗಿತ್ತು .

Facebook Comments

comments