DAKSHINA KANNADA
ಹಣ ವಸೂಲಿಗೆ ನಿಂತ ರೌಡಿ ಶೀಟರ್ ಗಳ ಹೆಡೆಮುರಿ ಕಟ್ಟಿದ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು…!!
ಪುತ್ತೂರು ಜನವರಿ 15: ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಹೊರಟಿದ್ದ ಇಬ್ಬರು ರೌಡಿಶೀಟರ್ ಗಳನ್ನು ಟ್ರ್ಯಾಪ್ ಮಾಡಿ ಹಣದ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಲ್ಲಡ್ಕ ಮಸೀದಿ ಬಳಿ ನಿವಾಸಿ ಖಲಂದರ್ ಶರೀಫ್‌ಶಾಫಿ ಹಾಗೂ ಮಂಗಳೂರು ಮಂಜನಾಡಿ ಕುಚ್ಚಿಗದ್ದೆ ಹಸನಬ್ಬಂಹಸನ್ ಅಚ್ಚು ಚುನ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ನಿವಾಸಿ ದರ್ಬೆಯಲ್ಲಿರುವ ನಸೀಬ್ ಬೋರ್‌ವೆಲ್ ಮಾಲಕ ಅಬೂಬಕ್ಕರ್ ಮುಲಾರ್ ಅವರಿಗೆ ಕಳೆದ ಒಂದು ವಾರಗಳಿಂದ ವಿವಿಧ ನಂಬರ್ ಗಳಿಂದ ಕರೆ ಮಾಡಿ 3.5 ಲಕ್ಷ ಹಣಕ್ಕಾಗಿ ಭೇಡಿಕೆ ಇಟ್ಟಿದ್ದರು, ಹಣ ನಿಡದೇ ಇದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ, ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ಜೀವ ಬೆದರಿಕೆ ಒಡ್ಡಿದ್ದರು.
ಈ ಹಿನ್ನಲೆ ಉದ್ಯಮಿ ಅಬೂಬಕ್ಕರ್ ಮುಲಾರ್ ಅವರು ಜ.೫ರಂದು ಪುತ್ತೂರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಖೆಡ್ಡಾಗೆ ಬಿಳಿಸಲು ಜನವರಿ 14ರಂದು ಉದ್ಯಮಿಯಿಂದ ಹಣ ಪಡೆದುಕೊಂಡು ಹೋಗುವ ಸಮಯ ತೀವ್ರ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಉದ್ಯಮಿಯಿಂದ ವಸೂಲಿ ಮಾಡಿದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಕಲಂದರ್ ಶರೀಫ್ ಶಾಫಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಹಸನಬ್ಬ ಹಸನ್ ಅಚ್ಚು ಅಚುನ್ ಈತನು ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಅಲ್ಲದೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.