LATEST NEWS
ವಿಟ್ಲದಲ್ಲಿ ಪೊಲೀಸ್ ಜೀಪ್ ಗೆ ಕಲ್ಲೆಸೆದು ಹಾನಿ ಮಾಡಿದ ದುಷ್ಕರ್ಮಿಗಳು
ವಿಟ್ಲದಲ್ಲಿ ಪೊಲೀಸ್ ಜೀಪ್ ಗೆ ಕಲ್ಲೆಸೆದು ಹಾನಿ ಮಾಡಿದ ದುಷ್ಕರ್ಮಿಗಳು
ಮಂಗಳೂರು ಎಪ್ರಿಲ್ 16: ಕರ್ತವ್ಯ ನಿಮಿತ್ತ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರಿಗೆ ಘೆರಾವ್ ಹಾಕಿ, ಪೊಲೀಸ್ ಜೀಪಿಗೆ ಕಲ್ಲೆಸೆದು ಪುಡಿಗಟ್ಟಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿ ನಡೆದಿದೆ.
ಕೇರಳ ಗಡಿಭಾಗ ವಿಟ್ಲ ಬಳಿಯ ಆನೆಕಲ್ಲು ಎಂಬಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಪೊಲೀಸರಿಗೆ ಕಲ್ಲೆಸೆದು ಮುತ್ತಿಗೆ ಹಾಕಿದ್ದಾರೆ. ಕಾಶ್ಮೀರದ ಅತ್ಯಾಚಾರ ಘಟನೆ ಖಂಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ನಡೀತಿದ್ದು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ರಸ್ತೆ ಸಂಚಾರ ಬಂದ್ ಮಾಡಿದ್ದಾರೆ.
ಕರ್ನಾಟಕ ಗಡಿಭಾಗದ ರಸ್ತೆಗಳನ್ನು ಕಲ್ಲು ಅಡ್ಡ ಇಟ್ಟು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಈ ವೇಳೆ ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಡಿಭಾಗದ ರಸ್ತೆ ಬ್ಲಾಕ್ ತೆರವಿಗೆ ಮುಂದಾಗಿದ್ದು ಸ್ಥಳೀಯ ಮುಸ್ಲಿಂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಅಲ್ಲದೆ, ಪೊಲೀಸ್ ಜೀಪಿಗೆ ಕಲ್ಲೆಸೆದು ಹಾನಿಗೊಳಿಸಿದ್ದಲ್ಲದೆ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಜೀಪಿನಿಂದ ಇಳಿಯಲೂ ಬಿಡದೆ ಸ್ಥಳದಿಂದ ಹಿಂದಕ್ಕೆ ಅಟ್ಟಿದ್ದಾರೆ. ನೀವ್ಯಾಕೆ ಬಂದಿದ್ದೀರಿ, ಕೇರಳ ಪೊಲೀಸರು ಬರಲಿ ಅಂತಾ ಆವಾಜ್ ಹಾಕಿದ್ದಾರೆ. ಹೀಗೆ ಪೊಲೀಸರಿಗೆ ಮುತ್ತಿಗೆ ಹಾಕಿದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.