LATEST NEWS
ಎಸ್ಕೇಪ್ ಆಗಲು ಯತ್ನಿಸಿದ ಚಡ್ಡಿಗ್ಯಾಂಗ್ ಗೆ ಗುಂಡಿನ ರುಚಿ ತೋರಿಸಿದ ಪೊಲೀಸರು
ಮಂಗಳೂರು, ಜುಲೈ 10: ಮಂಗಳೂರಿನಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರನ್ನು ಪೊಲೀಸರು ಕಳ್ಳತನ ನಡೆದ ಕೆಲವೇ ಘಂಟೆಗಳಲ್ಲಿ ಅರೆಸ್ಟ್ ಮಾಡಿದ್ದರು. ಈ ನಡುವೆ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್ ಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಮಂಗಳೂರಿನಲ್ಲಿ ಸರಣಿ ದರೋಡೆ ನಡೆಸಿ ಪರಾರಿಯಾಗಿದ್ದ ಮಧ್ಯಪ್ರದೇಶ ಮೂಲದ ಕತರ್ನಾಕ್ ಚಡ್ಡಿ ಗ್ಯಾಂಗ್ ಅನ್ನು ಪೊಲೀಸರು ಸಕಲೇಶಪುರದಲ್ಲಿ ಬಂಧಿಸಿದ್ದರು. ರಾತ್ರಿ ವೇಳೆ ಪರಾರಿಯಾಗಲು ಯತ್ನಿಸಿದಾಗ, ಚೆಡ್ಡಿ ಗ್ಯಾಂಗ್ ಸದಸ್ಯರ ಮೇಲೆ ಪೊಲೀಸರು ಶೂಟ್ ಔಟ್ ಮಾಡಿದ್ದಾರೆ. ಮುಲ್ಕಿ ಬಳಿ ಕಾರು ಬಿಟ್ಟು ಹೋಗಿದ್ದ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸುತ್ತಿದ್ದಾಗ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗುತ್ತಿದ್ದು ಈ ಸಂದರ್ಭ ಪೊಲೀಸರು ಕಾಲಿಗೆ ಗುಂಡೇಟು ಹಾರಿಸಿದ್ದಾರೆ. ಇಬ್ಬರ ಕಾಲಿಗೆ ಗುಂಡೇಟು ಬಿದ್ದಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮಂಗಳವಾರ ನಸುಕಿನಲ್ಲಿ ಉರ್ವಾ ಬಳಿಯ ಕೋಟೆಕಣಿಯಲ್ಲಿ ವೃದ್ಧ ದಂಪತಿಗೆ ಹಲ್ಲೆಗೈದು ದರೋಡೆ ನಡೆಸಿ ಪರಾರಿಯಾಗಿದ್ದ ನಾಲ್ವರು ಕಳ್ಳರನ್ನು ಬೆಂಗಳೂರು ಬಸ್ಸಿನಲ್ಲಿ ತೆರಳುತ್ತಿದ್ದಾಗಲೇ ಸಕಲೇಶಪುರದಲ್ಲಿ ಪೊಲೀಸರು ಅಡ್ಡಹಾಕಿ ಬಂಧಿಸಿದ್ದರು. ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದರು. ಆರೋಪಿಗಳು ಎಎಸ್ ಐ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.