LATEST NEWS
ದೈವಸ್ಥಾನಗಳ ಅಪಚಾರ ಪ್ರಕರಣ – ಪೂರಕ ಸಾಕ್ಷಿ ಕೊರತೆ ವಶಕ್ಕೆ ಪಡೆದವರನ್ನು ಬಿಟ್ಟು ಕಳುಹಿಸಿದ ಪೊಲೀಸರು
ಮಂಗಳೂರು: ದೈವಸ್ಥಾನಗಳ ಹುಂಡಿಗೆ ಕಾಂಡೋಮ್ ಮತ್ತು ಧರ್ಮ ನಿಂದನೆಯ ಬರಹಗಳನ್ನು ಹಾಕಿ ಅಪವಿತ್ರ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಪೂರಕ ಸಾಕ್ಷಿಗಳಿಲ್ಲದ ಕಾರಣ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಪೊರ್ಕೋಡಿಯ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಎಂಬುವರನ್ನು ಠಾಣೆಗೆ ಕರೆಯಿಸಿ 4 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್ 169ರನ್ವಯ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಇನ್ನೂ ಪೂರಕ ಸಾಕ್ಷೃಗಳು ದೊರೆತಿಲ್ಲ. ಸಾಕ್ಷೃಗಳು ದೊರೆತ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆರೋಪಿಗಳು ಈಗಲೂ ಸಂಶಯಾಸ್ಪದ ಆರೋಪಿಗಳೇ ಆಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ತಮ್ಮ ಸ್ನೇಹಿತನಾಗಿದ್ದ ನವಾಜ್ ಕೆಲವು ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಕೃತ್ಯ ಎಸಗಿದ್ದು ಆತ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ನಾವು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ. ಆದರೆ ವಿಷಯ ಗೊತ್ತಿದ್ದ ಕಾರಣ ನಮಗೂ ಭಯವಾಗುತ್ತಿದ್ದು ಅದಕ್ಕಾಗಿ ಎಮ್ಮೆಕೆರೆ ಬಬ್ಬುಸ್ವಾಮಿ-ಕೊರಗಜ್ಜನ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದೇವೆ ಎಂದು ಇಬ್ಬರು ಸಂಶಯಾಸ್ಪದ ಆರೋಪಿಗಳು ಹೇಳಿದ್ದರು. ಆದರೆ ಅವರು ಕೂಡ ನೇರವಾಗಿ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂಬುದಕ್ಕೆ ಪೂರಕ ಸಾಕ್ಷೃಗಳ ಅಗತ್ಯವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.