LATEST NEWS
ಮಂಗಳೂರು – ಹಗಲು ದರೋಡೆಯ ಅಣಕು ಕಾರ್ಯಾಚರಣೆ – ದರೋಡೆಕೋರರನ್ನು ಬೆನ್ನತ್ತಿದ್ದ ಸಾರ್ವಜನಿಕರು
ಮಂಗಳೂರು ಸೆಪ್ಟೆಂಬರ್ 12: ಮಂಗಳೂರಿನಲ್ಲಿ ಪೊಲೀಸರ ಅಣಕು ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಸಮಯ ವೈರಲ್ ಆಗಿ ನಿಜವಾದ ಘಟನೆ ಎಂದು ಜನ ತಿಳಿಯುವಂತೆ ಆಗಿತ್ತು. ಹಾಡಹಗಲೇ ಮಹಿಳೆಯನ್ನು ರಸ್ತೆಯಿಂದ ಎಳೆದೊಯ್ದು ದರೋಡೆಗೆ ಯತ್ನಿಸಿದ ಘಟನೆ ಇದಾಗಿದ್ದು, . ಕಾರಿನಲ್ಲಿ ಬಂದ ಮೂವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಎಳೆದು ಸರ ಹಾಗೂ ಬ್ಯಾಗನ್ನು ಎಳೆಯಲು ಯತ್ನಿಸಿ, ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಪರಾರಿಯಾಗಿದ್ದರು.ಆದರೆ ಇದೆಲ್ಲ ಪೊಲೀಸರ ಅಣಕು ಪ್ರದರ್ಶನ ಅನ್ನೋದು ಬಳಿಕ ಗೊತ್ತಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಇದೊಂದು ಅಣಕು ಪ್ರದರ್ಶನ, ಇಂತಹ ಘಟನೆಗಳು ಆದಾಗ ಸಾರ್ವಜನಿಕರು ಹೇಗೆ ಸ್ಪಂದಿಸುತ್ತಾರೆ. ಪೊಲೀಸರು ಎಷ್ಟು ಬೇಗ ಸ್ಪಂದಿಸುತ್ತಾರೆ ಎಂಬ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಕಾರಲ್ಲಿನ ಕಳ್ಳರಂತೆ ಬಂದವರು ಪೊಲೀಸ್ ಸಿಬ್ಬಂದಿ ಹಾಗೂ ಮಹಿಳೆ ಸೌರಕ್ಷಾ ವುಮೆನ್ ಟ್ರಸ್ಟ್ ನ ಶೋಭಾಲತಾ ಕಟೀಲ್ ಅವರು ಸಹಕರಿಸಿದ್ದಾರೆ ಎಂದರು.
ಈ ಅಣಕು ಕಾರ್ಯಾಚರಣೆ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡದ ಆಯುಕ್ತರು, ಪೊಲೀಸರು ಹೇಗೆ ಸ್ಪಂದಿಸುತ್ತಾರೆ ಎಂಬ ಬಗ್ಗೆ ತಿಳಿದುಕೊಂಡರು. ಕೃತ್ಯ ನಡೆಸಿ, ಪರಾರಿಯಾಗುತ್ತಿದ್ದ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ ಮತ್ತೊಂದು ಕಾರಿನವರಿಗೆ ಕಮೀಷನರ್ ಬಹುಮಾನ ಘೋಷಿಸಿದ್ದಾರೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಆಗಿದ್ದು, ಕದ್ರಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ನಾಕಾಬಂದಿ ಹಾಕಿ, ಕಾರ್ಯಪ್ರವೃತ್ತರಾಗಿದ್ದರು. ಪೊಲೀಸರ ಕೆಲಸಕ್ಕೂ ಕಮೀಷನರ್ ಭೇಷ್ ಅಂದಿದ್ದಾರೆ.