DAKSHINA KANNADA
ಮೃತ ವೃದ್ದನ ಶವ ಸಾಗಿಸಿ ಮಾನವೀಯತೆ ಮೆರೆದ ಪೊಲೀಸರು

ಮೃತ ವೃದ್ದನ ಶವ ಸಾಗಿಸಿ ಮಾನವೀಯತೆ ಮೆರೆದ ಪೊಲೀಸರು
ಪುತ್ತೂರು ಮಾರ್ಚ್ 04: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ದೈವದ ನೇಮೋತ್ಸವದ ಕಾರಣ ಗ್ರಾಮಸ್ಥರು ಮುಟ್ಟಲು ನಿರಾಕರಿಸಿದ ಸಂದರ್ಭ ಸ್ಥಳೀಯ ಪೋಲೀಸ್ ಎಸ್.ಐ ಸೇರಿದಂತೆ ಪೋಲೀಸ್ ಸಿಬ್ಬಂದಿಗಳೇ ಶವವನ್ನು ಮೃತರ ಮನೆಗೆ ಸಾಗಿಸಿದ ಘಟನೆ ಪುತ್ತೂರು ತಾಲೂಕಿನ ಕೊಯಿಲಾ ದಲ್ಲಿ ನಡೆದಿದೆ. ಕಡಬ ಪೋಲೀಸ್ ಠಾಣೆಯ ಎಸೈ ಪ್ರಕಾಶ್ ದೇವಾಡಿಗ, ಎಎಸೈ ರವಿ ಹಾಗೂ ಹೋಮ್ ಗಾರ್ಡ್ ಸಂದೇಶ್ ತನ್ನ ಮಾನವೀಯತೆ ಮೆರೆಯುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
80 ವರ್ಷದ ಹಸಲಪ್ಪ ಕೊಯಿಲಾ ದ ತನ್ನ ಮನೆಗೆ ಕಾಲು ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು.ಕೊಯಿಲಾದ ಸಮೀಪ ದೈವದ ಕಾರ್ಯಕ್ರಮವಿದ್ದ ಕಾರಣ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟವರು ಹುಟ್ಟಿದ ಅಥವಾ ಸತ್ತ ಮನೆಗೆ ತೆರಳಬಾರದು ಎನ್ನುವ ಸಂಪ್ರದಾಯವಿದ್ದು ಈ ಕಾರಣಕ್ಕಾಗಿ ಹಸಲಪ್ಪ ಸಂಬಂಧಿಕರು ಶವವನ್ನು ಮುಟ್ಟಲು ಹಿಂದೇಟು ಹಾಕಿದ್ದರು.

ಅಲ್ಲದೆ ಹಸಲಪ್ಪ ಮೂಲತ ತರೀಕೆರೆ ನಿವಾಸಿಯಾಗಿದ್ದು, ಆತನ ಮಗ ಕೊಯಿಲಾ ಗ್ರಾಮದ ಗಗ್ಗೋಡಿಯಿಂದ ಮದುವೆ ಮಾಡಿಕೊಂಡಿದ್ದ. ಇದೇ ಮನೆಯಲ್ಲಿ ದೈವದ ನೇಮೋತ್ಸವ ನಿಗದಿಯಾಗಿದ್ದ ಕಾರಣ ಮನೆ ಮಂದಿ ಶವ ಮುಟ್ಟಲು ನಿರಾಕರಿಸಿದ್ದಾರೆ. ಅಲ್ಲದೆ ಹಸಲಪ್ಪ ಮನೆ ಊರಿನಲ್ಲಿ ಕಳ್ಳತನ ಹಾಗೂ ಇತರ ಕೃತ್ಯಗಳಲ್ಲಿ ಭಾಗಿಯಾಗಿ ಊರಿನ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರಿಂದ ಊರಿನ ಜನರೂ ಶವ ಹೊರಲು ನಿರಾಕರಿದ್ದರು ಎನ್ನಲಾಗಿದೆ.