LATEST NEWS
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಸಾಧ್ಯತೆ….ನಗರದಲ್ಲಿ ಗನ್ ಪಾಯಿಂಟ್ ನಿರ್ಮಾಣ…
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಸಾಧ್ಯತೆ…. ನಗರದಲ್ಲಿ ಗನ್ ಪಾಯಿಂಟ್ ನಿರ್ಮಾಣ..
ಮಂಗಳೂರು ಡಿಸೆಂಬರ್ 19: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನಲೆ ನಗರದಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪ್ರತಿಭಟನೆಗಳು ನಡೆಯುವ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಲ್ಲಿ ಗನ್ ಪಾಯಿಂಟ್ ನ್ನು ಪೊಲೀಸ್ ಇಲಾಖೆ ನಿರ್ಮಿಸಿದೆ.
ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೆ ನಗರದ ಎ.ಬಿ ಶೆಟ್ಟಿ ಸರ್ಕಲ್ ಬಳಿಯ ಬಿ.ಬಿ ಸಾಹಿಬಾ ಮಸೀದಿ ಎದುರು ಗನ್ ಪಾಯಿಂಟ್ ನಿರ್ಮಿಸಲಾಗಿದ್ದು, ಸ್ಥಳದಲ್ಲಿಶಸ್ತ್ರ ಸಜ್ಜಿತ ಪೋಲಿಸರು ಬೀಡು ಬಿಟ್ಟಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್ .ಹರ್ಷ ನಗರದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಮುಸ್ಲಿಂ ಧರ್ಮಗುರುಗಳನ್ನು ಸಂಪರ್ಕಿಸಿಲಾಗಿದ್ದು, ಮುಸ್ಲಿಂ ಸೆಂಟ್ರಲ್ ಕಮಿಟಿ ಜೊತೆ ಮಾತನಾಡಿದ್ದೇವೆ. ನಗರದಲ್ಲಿ ಯಾವುದೇ ಪ್ರತಿಭಟನೆ ಮಾಡಲ್ಲ ಎಂದು ಭರವಸೆ ನೀಡಿದ್ದಾರೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾರು ಕೂಡಾ ಕಾನೂನು ಕೈಗೆತ್ತಿಗೊಳ್ಳದಂತೆ ಕಮಿಷನರ್ ಡಾ.ಪಿ.ಎಸ್.ಹರ್ಷ ಮನವಿ ಮಾಡಿದ್ದಾರೆ.