Connect with us

    DAKSHINA KANNADA

    ಅಕ್ರಮ ಪ್ರಶ್ನಿಸಿದಕ್ಕೆ ಪೋಲೀಸ್ ಗೆ ದಮ್ಕಿ, ಬಂಟ್ವಾಳಕ್ಕೆ ಮತ್ತೆ ಕಸಾಯಿ ಮನ್ಸೂರು ಎಂಟ್ರಿ..

    ಅಕ್ರಮ ಪ್ರಶ್ನಿಸಿದಕ್ಕೆ ಪೋಲೀಸ್ ಗೆ ದಮ್ಕಿ, ಬಂಟ್ವಾಳಕ್ಕೆ ಮತ್ತೆ ಕಸಾಯಿ ಮನ್ಸೂರು ಎಂಟ್ರಿ..

    ಮಂಗಳೂರು, ಅಕ್ಟೋಬರ್ 9: ಸ್ಮಾರ್ಟ್ ಸಿಟಿಗಾಗಿ ಕೇಂದ್ರ ಸರಕಾರದಿಂದ ಬಂದ ಅನುದಾನದಲ್ಲಿ 15 ಕೋಟಿ ರೂಪಾಯಿಗಳನ್ನು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗೆ ಮೀಸಲಿಟ್ಟು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿವಾದ ಸೃಷ್ಟಿಸಿಕೊಂಡಿದ್ದಾರೆ.

    ಸಚಿವ ಯು.ಟಿ.ಖಾದರ್ ರ ಈ ನಿರ್ಧಾರ ಜಿಲ್ಲೆಯ ಬಿಜೆಪಿ ನಾಯಕರನ್ನು ಹಾಗೂ ಜನಪ್ರತಿನಿಧಿಗಳ ಕೆಂಗಣ್ಣಿಗೂ ಗುರಿಯಾಗಿದೆ.

    ಈ ನಡುವೆ ಕಸಾಯಿಖಾನೆಗೆ ಮೀಸಲಿಟ್ಟ ಹಣದ ವಿಚಾರಕ್ಕೆ ಸಂಬಂಧಿಸಿದ ಸಭೆಯಲ್ಲಿದ್ದ ಬಿಜೆಪಿ ನಾಯಕರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವ ಬಾಂಬನ್ನೂ ಸಚಿವರು ಸಿಡಿಸಿದ ಬಳಿಕ ಮತ್ತೆ ಈ ವಿವಾದ ತಿಂಗಳುಗಟ್ಟಲೆ ಬಿಸಿಯಾಗಿರುವಂತೆಯೇ ಮಾಡಿದ್ದಾರೆ.

    ಈ ನಡುವೆ ಕಸಾಯಿಖಾನೆಯ ಅಭಿವೃದ್ಧಿ ಮಾಡಲೂ ಸರಕಾರ ಕೋಟಿಗಟ್ಟಲೆ ಹಣ ನೀಡುತ್ತದೆ ಎಂದು ತಿಳಿದು ಗಲ್ಲಿ ಗಲ್ಲಿಯಲ್ಲಿರುವ ಅಕ್ರಮ ಕಸಾಯಿಖಾನೆಗಳ ರೂವಾರಿಗಳು ಇದೀಗ ಮೈ ಕೊಡವಿ ಎಚ್ಚೆತ್ತುಕೊಂಡಿದ್ದಾರೆ.

    ತಮ್ಮ ಕಸಾಯಿಖಾನೆಗಳನ್ನು ಸೈಟಿನ ತರ ಅಕ್ರಮ-ಸಕ್ರಮದಡಿ ಸಕ್ರಮ ಮಾಡಿಸಿಕೊಳ್ಳಬಹುದೋ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

    ಈ ನಡುವೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಅಮ್ಮೆಮ್ಮಾರ್ ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಮನ್ಸೂರು ಎನ್ನುವ ವ್ಯಕ್ತಿಯೂ ಇದೀಗ ಮತ್ತೆ ಕಸಾಯಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾನೆ ಎನ್ನುವ ಮಾಹಿತಿ  ಪೋಲೀಸರಿಗೆ ಲಭ್ಯವಾಗಿತ್ತು.

    ಈ ವಿಚಾರವಾಗಿ ಮನ್ಸೂರ್ ಮನೆಗೆ ತೆರಳಿ ಠಾಣೆಗೆ ವಿಚಾರಣೆಗೆ ಬರುವಂತೆ ಕರೆದ ಪೋಲೀಸ್ ಕಾನ್ ಸ್ಟೇಬಲ್ ಗೆ ಈತ ದಮ್ಕಿ ಹಾಕಿ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ವಿಚಾರಣೆಗೆ ಕರೆದ ಕಾನ್ ಸ್ಟೇಬಲ್ ಬಳಿ ನಾನು ಯಾರು ಗೊತ್ತೇ, ನನ್ನ ಕೈ ಕಾಲು ಎಲ್ಲಿ ತನಕ ಚಾಚುತ್ತೇ ಎನ್ನುವುದರ ಅರಿವಿದೆಯೇ, ನಾನು ಯಾರೆಂದು ನಿನ್ನ ಹಿರಿಯ ಅಧಿಕಾರಿಗಳಲ್ಲಿ ಕೇಳು, ನಾನು ಯಾರ ಜನ ಎಂದು ಅವರು ನಿನಗೆ ಹೇಳುತ್ತಾರೆ ಎಂದೆಲ್ಲಾ ಹೆದರಿಸಿ ಗದರಿಸಿ ಮನೆಯಿಂದ ಹೊರದಬ್ಬಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ.

    ಆದರೆ ಪೋಲೀಸರು ಮಾತ್ರ ಏನೂ ನಡೆದಿಲ್ಲ ಎನ್ನುವ ರೀತಿಯಲ್ಲಿ ಈ ವಿಚಾರವನ್ನು ಅಲ್ಲಿಗೇ ಅದುಮಿಕೊಂಡು ಕುಳಿತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

    ಮಾಮೂಲಿ ವ್ಯಕ್ತಿಯೋರ್ವ ಕಣ್ತಪ್ಪಿನಿಂದ ಮೈ ಮುಟ್ಟಿದರೂ, ಒದ್ದು ಲಾಕಪ್ ಗೆ ತಳ್ಳುವ ಪೋಲೀಸರು, ಮನ್ಸೂರು ವಿಚಾರದಲ್ಲಿ ಇಷ್ಟೊಂದು ಕೂಲ್ ಆಗಲು ಕಾರಣವೇನು ಎನ್ನುವುದು ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *