LATEST NEWS
‘ನನ್ನ ಹೆಸರು ನ್ಯಾನೋ ಕಾರು, ನನ್ನ ಮಾಲೀಕ ಇನ್ಯೂರೆನ್ಸ್ ಮಾಡಿಲ್ಲ…ನಾನು ಈಗ ಅನಾಥ
ಮಂಗಳೂರು ಜೂನ್ 20: ವಾಹನಗಳ ದಾಖಲೆ ಇಟ್ಟುಕೊಳ್ಳದೇ ಸಂಚಾರ ನಡೆಸುವವರಿಗೆ ಮಂಗಳೂರು ಪೊಲೀಸರು ಒಂದು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಾಹನಗಳ ಚಾಲನೆ ಮಾಡುವವರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂದು ಪೊಲೀಸ್ ಇಲಾಖೆ ತಿಳಿಸುತ್ತಲೇ ಇರುತ್ತದೆ. ಆದರೆ ಜನರು ಮಾತ್ರ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದೆ ವಾಹನಗಳಲ್ಲಿ ಸವಾರಿ ಮಾಡುತ್ತಾರೆ. ಅಲ್ಲದೆ ಸೂಕ್ತ ದಾಖಲೆ ಪತ್ರಗಳು ಇಲ್ಲದೇ ಇದ್ದಾಗ ಪೊಲೀಸರನ್ನು ಕಂಡು ಹೆದರಿ ತಪ್ಪಿಸಿಕೊಳ್ಳುವ ಭರದಲ್ಲಿ ವಾಹನಗಳು ಅಪಾಯಕ್ಕೀಡಾಗಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.
ಇನ್ನು ವಾಹನ ಅಪಘಾತಗಳಾದ ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿ ಅದನ್ನು ಪೊಲೀಸ್ ಠಾಣೆ ಬಳಿ ತಂದಿರಿಸುತ್ತಾರೆ. ವಾಹನಗಳಿಗೆ ಸೂಕ್ತ ದಾಖಲೆ ಇದ್ದರೆ ಅವುಗಳನ್ನು ನ್ಯಾಯಾಲಯದ ಮೂಲಕ ವಾಹನದ ಮಾಲೀಕ ವಾಪಾಸ್ ಪಡೆಯಬಹುದು, ಆದರೆ ದಾಖಲೆಗಳೇ ಇಲ್ಲದಿದ್ದರೆ ವಾಹನ ಸೀಜ್ ಆಗಿ ಪೊಲೀಸ್ ಠಾಣೆಯಲ್ಲಿ ಕೊಳೆಯಬೇಕಾಗುತ್ತದೆ. ಅಂತಹುದೇ ಒಂದು ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ವಾಹನ ಬಳಸಿ ಇದೀಗ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ಕದ್ರಿಯಲ್ಲಿರುವ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಸಮೀಪದಲ್ಲಿ ಅಪಘಾತಕ್ಕೀಡಾದ ನ್ಯಾನೋ ಕಾರೊಂದನ್ನು ತಂದಿರಿಸಲಾಗಿದೆ.
ಇಲ್ಲಿ ಕಾರಿನ ಸ್ವಗತ ಹೇಳಿಕೆ ನಮ್ಮಲ್ಲಿ ಜಾಗೃತಿ ಮೂಡಿಸುತ್ತಿದೆ. ಕಾರಿನ ಮೇಲ್ಭಾಗದಲ್ಲಿ ‘ನನ್ನ ಹೆಸರು ನ್ಯಾನೋ ಕಾರು, ನನ್ನ ಮಾಲೀಕ ಇನ್ಯೂರೆನ್ಸ್ ಮಾಡಿಲ್ಲ. ಜೂನ್ 11ರಂದು ಯೆಯ್ಯಾಡಿ ಜಂಕ್ಷನ್‌ನಲ್ಲಿ ಮಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಆದರೆ ವಿಮೆ ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇರಿಸಲಾಗಿದೆ. ನಾನು ಅನಾಥವಾಗಿದ್ದೇನೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ,ನಿಮ್ಮ ವಾಹನಕ್ಕೆ ವಿಮೆ ಮಾಡಿಸಿ’ ಎಂದು ಅದರಲ್ಲಿ ಬರೆಯಲಾಗಿದೆ.