LATEST NEWS
ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಮೂವರು ಸಿಬ್ಬಂದಿ ಅಮಾನತು
ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಮೂವರು ಸಿಬ್ಬಂದಿ ಅಮಾನತು
ಪುತ್ತೂರು ಜೂನ್ 29: ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್ ಠಾಣೆ ಮೂವರು ಸಿಬ್ಬಂದಿಗಳನ್ನು ದಕ್ಷಿಣಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್ ಲಕ್ಷ್ಮೀಪ್ರಸಾದ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಚಿನ್ನ ಕದ್ದಿದ್ದಾರೆ ಎನ್ನುವ ಆರೋಪಕ್ಕೆ ಬಡ ಕುಟುಂಬವೊಂದನ್ನು ಸಂಪ್ಯ ಪೋಲೀಸ್ ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕುಟುಂಬದ ಅಪ್ರಾಪ್ತ ಬಾಲಕಿಗೂ ಈ ಸಂಬಂಧ ಪೋಲೀಸರು ಹಲ್ಲೆ ನಡೆಸಿದ್ದು ಬಾಲಕಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಬಿತ್ತವಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ಲಕ್ಷ್ಮೀಪ್ರಸಾದ್, ಪುತ್ತೂರು ಆಸ್ಪತ್ರೆಗೆ ತೆರಳಿ ಪ್ರಕರಣದ ಮಾಹಿತಿ ಪಡೆದಿದ್ದಾರೆ.
ಅಪ್ರಾಪ್ತೆಗೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಸಂಪ್ಯ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳನ್ನು ಕರ್ತವ್ಯ ಲೋಪದಡಿ ಅಮಾನತಿಗೆ ಆದೇಶಿಸಿದ್ದಾರೆ. ಗಾಯತ್ರಿ, ಪ್ರಶ್ನಿತಾ, ದಿನೇಶ್ ಇವರು ಅಮಾನತಾದ ಪೊಲೀಸ್ ಸಿಬ್ಬಂದಿಗಳು ಎಂದು ತಿಳಿದು ಬಂದಿದೆ.
ಕೌಡಿಚಾರ್ ನ ಮುಮ್ತಾಜ್ ಎಂಬವರ ಮನೆಯಿಂದ ಚಿನ್ನದ ಹಾರ ಕಳವಾಗಿದ್ದು, ಬಾಲಕಿ ಆಶಾ ಈ ಚಿನ್ನವನ್ನು ಕದ್ದಿದ್ದಾಳೆ ಎಂದು ಸಂಪ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಸಂಪ್ಯ ಪೋಲೀಸರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.ವಿಚಾರಣೆ ಸಂದರ್ಭದಲ್ಲಿ ಪೋಲೀಸರು ಪೋಷಕರಿಗೆ ಸೇರಿದಂತೆ ಅಪ್ರಾಪ್ತ ಬಾಲಕಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿದೆ.
ಬಾಲಕಿಗೆ ಚಿನ್ನ ಕದ್ದಿರುವುದನ್ನ ಒಪ್ಪಿಕೊಳ್ಳುವಂತೆ ಪೋಲೀಸರು ಒತ್ತಡ ಹೇರಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರಲ್ಲದೆ, ವಿದ್ಯುತ್ ಶಾಕ್ ಕೂಡಾ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.