DAKSHINA KANNADA
ಅಪ್ರಾಪ್ತ ಬಾಲಕಿ ಮೇಲೆ ಸಂಪ್ಯ ಪೊಲೀಸ್ ದೌರ್ಜನ್ಯ ಆರೋಪ
ಅಪ್ರಾಪ್ತ ಬಾಲಕಿ ಮೇಲೆ ಸಂಪ್ಯ ಪೊಲೀಸ್ ದೌರ್ಜನ್ಯ ಆರೋಪ
ಪುತ್ತೂರು ಜೂನ್ 29: ಚಿನ್ನ ಕದ್ದಿದ್ದಾಳೆ ಎಂದು ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆ ಪುತ್ತೂರು ಗ್ರಾಮಾಂತರ ಸಂಪ್ಯ ಪೋಲೀಸ್ ಠಾಣೆಯಲ್ಲಿ ನಡೆದಿದೆ.
ಚಿನ್ನ ಕದ್ದಿದ್ದಾರೆ ಎನ್ನುವ ಆರೋಪಕ್ಕೆ ಬಡ ಕುಟುಂಬವೊಂದನ್ನು ಪೋಲೀಸ್ ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬದ ಅಪ್ರಾಪ್ತ ಬಾಲಕಿಗೂ ಈ ಸಂಬಂಧ ಪೋಲೀಸರು ಹಲ್ಲೆ ನಡೆಸಿದ್ದು ಬಾಲಕಿಯನ್ನು ಇದೀಗ ಪುತ್ತೂರು ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ.
ಕೌಡಿಚಾರ್ ನ ಮುಮ್ತಾಜ್ ಎಂಬವರ ಮನೆಯಿಂದ ಚಿನ್ನದ ಹಾರ ಕಳವಾಗಿದ್ದು, ಬಾಲಕಿ ಆಶಾ ಈ ಚಿನ್ನವನ್ನು ಕದ್ದಿದ್ದಾಳೆ ಎಂದು ಸಂಪ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಸಂಪ್ಯ ಪೋಲೀಸರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.ವಿಚಾರಣೆ ಸಂದರ್ಭದಲ್ಲಿ ಪೋಲೀಸರು ಪೋಷಕರಿಗೆ ಸೇರಿದಂತೆ ಅಪ್ರಾಪ್ತ ಬಾಲಕಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿದೆ.
ಬಾಲಕಿಗೆ ಚಿನ್ನ ಕದ್ದಿರುವುದನ್ನ ಒಪ್ಪಿಕೊಳ್ಳುವಂತೆ ಪೋಲೀಸರು ಒತ್ತಡ ಹೇರಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರಲ್ಲದೆ, ವಿದ್ಯುತ್ ಶಾಕ್ ಕೂಡಾ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಬಾಲಕಿ ಮುಮ್ತಾಜ್ ಮನೆಗೆ ಶುಕ್ರವಾರದಂದು ಹೋಗಿದ್ದು, ಆ ಬಳಿಕ ಚಿನ್ನ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸಂಪ್ಯ ಪೋಲೀಸರು ಈ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.