Connect with us

LATEST NEWS

ಪ್ರೀತಿಗೆ ಅಡ್ಡಿ ಐಸ್ ಕ್ರೀಂನಲ್ಲಿ ವಿಷ ಹಾಕಿದ ಯುವಕ; ಸಹೋದರಿ ಸಾವು

ಕಾಸರಗೋಡು: ತನ್ನ ಪ್ರೀತಿಗೆ ಮನೆಯವರು ಅಡ್ಡಿಯಾದರೆಂದು ತಿಳಿದು ಯುವಕನೊಬ್ಬ ಐಸ್ ಕ್ರೀಂ ಗೆ ವಿಷ ಬೆರೆಸಿ ಮನೆಯವರನ್ನು ಕೊಲ್ಲಲು ಪ್ರಯತ್ನಿಸಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ, ಈ ಘಟನೆಯಲ್ಲಿ ಯುವಕನ ಸಹೋದರಿ ಸಾವನಪ್ಪಿದ್ದು, ತಂದೆ ಸ್ಥಿತಿ ಗಂಭೀರವಾಗಿದೆ.


ಕಳೆದ ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಬಳಾಲ್ ಅರಿಂಗಲ್ ನ ಬೆನ್ನಿ ಅವರ ಪುತ್ರಿ ಆನ್ ಮೇರಿ (16) ಮೃತಪಟ್ಟವರು. ಕೃತ್ಯಕ್ಕೆ ಸಂಬಂಧಪಟ್ಟಂತೆ ಸಹೋದರ ಅಲ್ಬಿನ್ ಬೆನ್ನಿ ( 22) ಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಬೆನ್ನಿ ಜಿಲ್ಲಾಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಂಧರ್ಬಿಕ ಚಿತ್ರ

ಆರೋಪಿ ಅಲ್ಬಿನ್ ಬೆನ್ನಿಯ ಪ್ರೇಮ ಹಾಗೂ ಅಕ್ರಮ ವ್ಯವಹಾರಗಳಿಗೆ ಮನೆಯವರು ಅಡ್ಡಿಯಾಗುತ್ತಿದ್ದಾರೆ ಎಂದು ತಿಳಿದ ಆಲ್ಬಿನ್ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಂ ಗೆ ವಿಷ ಹಾಕಿದ್ದ. ಇದೇ ಐಸ್ ಕ್ರೀಂ ತಿಂದು ಅಲ್ಬಿನ್ ಸಹೋದರಿ ಹಾಗೂ ತಂದೆ- ತಾಯಿಗೆ ವಾಂತಿ ಬೇಧಿ ಸೇರಿದಂತೆ ಅಸ್ವಸ್ಥತೆ ಉಂಟಾಗಿತ್ತು. ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ನಂಬಿ ಮೂವರು ಮನೆ ಮದ್ದನ್ನು ಸೇವಿಸಿದ್ದರು.

ಎರಡು ದಿನಗಳ ಬಳಿಕ ಆನ್ ಮೇರಿ ಅಸ್ವಸ್ಥಗೊಂಡಿದ್ದು, ಇದರಿಂದ ಚೆರುಪ್ಪುಯದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವೆ ಆನ್ ಮೇರಿಗೆ ಹಳದಿ ಕಾಮಾಲೆ ಕಂಡುಬಂದಿತ್ತು. ಸ್ಥಿತಿ ಗಂಭೀರಗೊಂಡು ನಂತರ ಮೃತಪಟ್ಟರು. ಇದಲ್ಲದೆ ಬೆನ್ನಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ಆರಂಭದಲ್ಲಿ ನಂಬಲಾಗಿತ್ತು. ಆದರೆ ಅನ್ನಾ ಮೇರಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯಿಂದ ಅನ್ನಾ ಮೇರಿ ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಖಚಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಆಲ್ಬಿನ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್ ನಲ್ಲಿ ಪತ್ತೆಯಾಗಿರ ಲಿಲ್ಲ. ಇದರಿಂದ ಆಲ್ಬಿನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಐಸ್ ಕ್ರೀಮ್ ನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

comments