LATEST NEWS
ಶಿರೂರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆ..!

ಶಿರೂರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆ..!!
ಉಡುಪಿ , ಜುಲೈ 19 : ಉಡುಪಿಯ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಮೃತದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮಣಿಪಾಲ ಕೆ ಎಂಸಿ ಆಸ್ಪತ್ರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಆದರೆ ವಿಷದ ಪ್ರಮಾಣ ಎಷ್ಟರ ಮಟ್ಟಿಗೆ ಇದ್ದಿತು ಎಂಬ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ. ಆಸ್ಪತ್ರೆಯ ಈ ಪ್ರಕಟಣೆ ಹೊರಬಿದ್ದ ನಂತರ ಪೊಲೀಸರ ಸಮಗ್ರ ತನಿಖೆ ನಡೆಯಲಿದ್ದು, ಆ ನಂತರ ಸಮಗ್ರ ಮಾಹಿತಿ ಹೊರ ಬರಲಿದೆ.

ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಶ್ರೀಗಳ ಹಠಾತ್ ನಿಧನ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು, ಅವರ ಭಕ್ತರ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಿದ್ದರು.
ಸ್ವಾಮೀಜಿಗಳನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಮ್ಮ ವೈದ್ಯರ ತಂಡವೆಲ್ಲರೂ ಸೇರಿ ಚಿಕಿತ್ಸೆ ಕೊಟ್ಟಿದ್ದೆವು. ಆದರೆ ಬಹು ಅಂಗಾಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು. ನಮ್ಮ ಸಂಶಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಮುಂದಿನ ಕ್ರಮ ಪೊಲೀಸರು ಕೈಗೊಳ್ಳುತ್ತಾರೆ.
ಕೆಎಂಸಿ. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಅವಿನಾಶ್ ಹೇಳಿದ್ದಾರೆ.
ಶ್ರೀಗಳು ಸೇವಿಸಿದ ಆಹಾರದಲ್ಲಿ ವಿಷಪ್ರಾಶನವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಇದೀಗ ಹಲವಾರು ಅನುಮಾನಗಳು ಎದ್ದಿವೆ. ಮೊನ್ನೆ ಜುಲೈ 16ರಂದು ಶಿರೂರು ಮೂಲಮಠದಲ್ಲಿ ವನಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆ ಕಾರ್ಯಕ್ರಮಲ್ಲಿ ಆಹಾರ ಸೇವಿಸಿದ ಬಳಿಕ ಶ್ರೀಗಳು ಸ್ವಲ್ಪ ಹೊತ್ತಿನಲ್ಲಿ ತೀವ್ರ ಅಸ್ವಸ್ಥಕ್ಕೀಡಾಗಿದ್ದರು. ಅಂದೇ ಅವರನ್ನು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಕಾರಣ ಕಳೆದ ಮಂಗಳವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ತೀವ್ರ ಆನಾರೋಗ್ಯಕ್ಕೀಡಾದ ಶ್ರೀಗಳಿಗೆ ವೈದ್ಯರು ನೀಡಿದ ಚಿಕಿತ್ಸೆ ಯಾವುದೇ ಫಲ ನೀಡಲಿಲ್ಲ.
ಇತ್ತೀಚೆಗೆ ತಮ್ಮ ಪಟ್ಟದ ದೇವರನ್ನು ನೀಡದಿರುವುದನ್ನು ಪ್ರಶ್ನಿಸಿ ಇತರೇ ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಅಲ್ಲದೇ ಉಳಿದ ಮಠಾಧೀಶರು ತನ್ನ ಮೇಲೆ ಉತ್ತರಾಧಿಕಾರಿ ಹೊಂದುವಂತೆ ಹಾಕುತ್ತಿರುವ ಒತ್ತಡದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ತೆರಳಿ ತಡೆಯಾಜ್ಞೆ ತಂದಿದ್ದರು.