DAKSHINA KANNADA
ಸುಳ್ಯ – ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರು ಆಗದ ಸೇತುವೆ..ಕೊನೆಗೆ ಜನರೇ ನಿರ್ಮಿಸಿದರು ಗ್ರಾಮ ಸೇತು
ಸುಬ್ರಹ್ಮಣ್ಯ ಜೂನ್ 26: ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರೂ ಕೂಡ ಜನರ ಬೇಡಿಕೆಯ ಸೇತುವೆ ನಿರ್ಮಿಸಲು ವಿಫಲರಾದ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಗ್ರಾಮಸ್ಥರೇ ಸೇತುವೆ ನಿರ್ಮಿಸಿದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ಸುಳ್ಯ ತಾಲೂರಿನ ಗುತ್ತಿಗಾರು ಗ್ರಾಮದ ಜನರು ಸೇತುವೆಗಾಗಿ ಸ್ಥಳೀಯ ಶಾಸಕ, ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು, ಆದರೆ ಪ್ರಯೋಜನವಾಗದ ಹಿನ್ನಲೆ ಪ್ರಧಾನಿಗೆ ಗ್ರಾಮದ ಸಮಸ್ಯೆ ಬಗ್ಗೆ ಸಿಡಿ ಮಾಡಿ ಮನವಿ ಸಲ್ಲಿಸಿದ್ದರು, ಈ ಹಿನ್ನಲೆ ಪ್ರಧಾನಿ ಕಾರ್ಯಾಲಯ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಗೆ ಈ ಕುರಿತಂತೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು, ಆದರೆ ಅಧಿಕಾರಿಗಳು ಮಾತ್ರ ಪ್ರಧಾನಿ ಮಾತಿಗೂ ಕ್ಯಾರೆ ಅನ್ನದೇ ತಮ್ಮಷ್ಟಕ್ಕೆ ತಾವು ಇದ್ದರು.
ಈ ಹಿನ್ನಲೆ ಪ್ರಧಾನಿ ಹೇಳಿದರೂ ಅಧಿಕಾರಿಗಳು ಕೇಳದ ಕಾರಣ ಪತ್ರಕರ್ತ ಕೃಷಿಕ ಮಹೇಶ್ ಪುಚ್ಚಪ್ಪಾಡಿ ಅವರ ನೇತೃತ್ವದ ಯುವಕರ ತಂಡವು ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ಸೇತುವೆ ನಿರ್ಮಾಣಕ್ಕೆ ಮುಂದಾದರು. ಜೂನ್ 5 ರಂದು ಅಂದಾಜುಪಟ್ಟಿ ತಯಾರಿಸಿ ಜೂನ್ 24 ರಂದು ಕಾಮಗಾರಿ ಮುಕ್ತಾಯಗೊಂಡಿದೆ. ಈ ಕಾಲು ಸಂಕ ಸುಮಾರು 20 ಮೀಟರ್ ಉದ್ದವಿದ್ದು, ಸುಮಾರು 1.2 ಮೀಟರ್ ಅಗಲಿವಿದೆ. ನಡೆದಾಡುವುದು ಮಾತ್ರವಲ್ಲ ದ್ವಿಚಕ್ರ ವಾಹನಗಳೂ ಓಡಾಡಬಹುದಾಗಿದೆ. ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಗ್ರಾಮಸ್ಥರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಜನಪ್ರತಿನಿಧಿಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ‘ಜನರಿಂದ ಜನರಿಗಾಗಿ ಜನರೇ ಗ್ರಾಮ ಸೇತು’ ಎಂಬ ಹೆಸರಿನಲ್ಲಿ ಗ್ರಾಮಸ್ಥರೇ ಕಾಲು ಸಂಕ ನಿರ್ಮಿಸಿದ್ದಾರೆ.
ತೂಗುಸೇತುವೆಗಳ ತಜ್ಞ ಸುಳ್ಯದ ಗಿರೀಶ್ ಭಾರದ್ವಾಜ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನಸಹಾಯ ಮಾಡಿದ್ದಾರೆ. ಪರವೂರಿನ ದಾನಿಗಳು, ಖಾಸಗಿ ಕಂಪನಿಗಳೂ ನೆರವು ನೀಡಿದೆ. ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ತಲೆಯೆತ್ತಿದೆ.