Connect with us

    DAKSHINA KANNADA

    ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ : ಮೂಲ್ಕಿಯಲ್ಲಿ ಬೃಹತ್‌ ಸಮಾವೇಶ

    ಮಂಗಳೂರು, ಮೇ 02: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ನಿಮಿತ್ತ ನಾಳೆ (ಮೇ 3) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದು, ಮೂಲ್ಕಿ ಬಳಿಯ ವಿಶಾಲ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದೆ.

    ಎರಡೂ ಜಿಲ್ಲೆಗಳ ಮಧ್ಯಭಾಗದ ಮೂಲ್ಕಿಯ ಕೊಳ್ನಾಡಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಲು ಅನುಕೂಲವಾಗಲಿದೆ.

    ಈಗಾಗಲೇ ವೇದಿಕೆ ಮತ್ತು ಪೆಂಡಾಲ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ವಾಹನಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗಿದೆ. ಇಂದು ಮಧ್ಯಾಹ್ನದೊಳಗೆ ಎಲ್ಲ ಕೆಲಸ ಪೂರ್ಣಗೊಂಡು ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿಗೆ ಬಿಟ್ಟುಕೊಡಲಾಗುತ್ತದೆ.

    ಬೆಳಗ್ಗೆ 9 ಗಂಟೆಗೆ  ಸಮಾವೇಶ

    ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆ ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದು, ಆಗಮಿಸುವ ಕಾರ್ಯಕರ್ತರು, ಸಾರ್ವಜನಿಕರು ಬೆಳಗ್ಗೆ 9 ಗಂಟೆಯೊಳಗೆ ಸಮಾವೇಶದ ಸ್ಥಳಕ್ಕೆ ಆಗಮಿಸುವಂತೆ ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹೊತ್ತಿಗೆ ಸಮಾವೇಶದ ಪರಿಸರದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ.

    ಉಪಹಾರಕ್ಕೆ ನೀರುದೋಸೆ, ಮೂಡೆ…..

    ಮೋದಿ ನೇರವಾಗಿ ಮಂಗಳೂರಿಗೆ ಬಂದಿಳಿಯುವುದರಿಂದ ಅವರಿಗೆ ವಿಮಾನ ನಿಲ್ದಾಣದಲ್ಲೇ ಉಪಹಾರಕ್ಕೆ ಉಪ್ಪಿಟ್ಟು ಅವಲಕ್ಕಿ, ಮೂಡೆ, ನೀರ್‌ದೋಸೆ ಮುಂತಾದ ಎಲ್ಲ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಆನಂತರ ಬಜಪೆಯಿಂದ ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸುತ್ತಾರೆ. ಹೆಲಿಕಾಪ್ಟರ್‌ ಇಳಿಯಲು ಪಣಂಬೂರಿನ ಎನ್‌ಎಂಪಿಎ, ಸುರತ್ಕಲ್‌ನ ಎನ್‌ಐಟಿಕೆ, ಹಾಗೂ ಮೂಲ್ಕಿಯ ಸಮಾವೇಶದ ಸ್ಥಳದ ಪಕ್ಕದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *