DAKSHINA KANNADA
ಪುಳಿಕುಕ್ಕು ಬಳಿ ಮೊಸಳೆ ಸಾವಿಗೆ ಪ್ಲಾಸ್ಟಿಕ್ ಕಾರಣ – ಮೊಸಳೆ ಹೊಟ್ಟೆಯಲ್ಲಿತ್ತು 1 ಕೆಜಿಗೂ ಅಧಿಕ ಪ್ಲಾಸ್ಟಿಕ್
ಪುತ್ತೂರು ಎಪ್ರಿಲ್ 16: ಇತ್ತೀಚೆಗೆ ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಪತ್ತೆಯಾದ ಮೃತ ಮೊಸಳೆಯ ಸಾವಿಗೆ ಪ್ಲಾಸ್ಟಿಕ್ ಕಾರಣ ಎಂದು ಆಘಾತಕಾರಿ ವರದಿ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ.
ಕಡಬ – ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು
ಮರಣೋತ್ತರ ಪರೀಕ್ಷೆ ನಡೆಸುವಾಗ ಮೊಸಳೆಯ ಹೊಟ್ಟೆಯಲ್ಲಿ 1 ಕೆಜಿಗೂ ಅಧಿಕ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್‌ಗಳು ಪತ್ತೆಯಾಗಿತ್ತು. ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೇ ಅನಾರೋಗ್ಯದಿಂದ ಮೊಸಳೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.