DAKSHINA KANNADA
ಉಪ್ಪಿನಂಗಡಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್, ಹಲವರಿಗೆ ಗಾಯ, 144 ಸೆಕ್ಷನ್ ಜಾರಿ
ಪುತ್ತೂರು, ಡಿಸೆಂಬರ್ 14 : ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ 20 ಕ್ಕೂ ಅಧಿಕ ಕಾರ್ಯಕರ್ತರು ಗಾಯಗೊಂಡಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊಲೆಯತ್ನ ಆರೋಪದ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಎದುರು ಬೆಳಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು ಸಂಜೆಯಾಗುತ್ತಲೇ ಉಗ್ರ ಸ್ವರೂಪ ಪಡೆದಿತ್ತು. ಸಂಜೆ ಠಾಣೆಯ ಮುಂದೆ ಸಾಮೂಹಿಕ ನಮಾಜ್ ಮಾಡಲು ಮುಂದಾದಾಗ ಅದನ್ನು ತಡೆಯಲು ಹೋದ ಪೊಲೀಸ್ ಮತ್ತು ಪಿಎಫ್‌ಐ ಕಾರ್ಯಕರ್ತರ ನಡುವೆ ತೀರ್ವ ಮಾತಿನ ಚಕಮಕಿ ನಡೆದು ಘರ್ಷಣೆಯ ಹಂತಕ್ಕೆ ತಲುಪಿತ್ತು.
ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಯಿಸಿ ಪುತ್ತೂರು ಡಿವೈ ಎಸ್ ಪಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ವಶಕ್ಕೆ ಪಡೆದವರಲ್ಲಿ ಓರ್ವನನ್ನು ಬಿಡುಗಡೆ ಮಾಡಿದ್ದರು.
ಉಳಿದವರನ್ನು ವಿಚಾರಣೆ ನಡೆಸಿ ನಿರಪರಾಧಿಯಾಗಿದ್ದಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ರಾತ್ರಿ ಮತ್ತೆ ಏಕಾಏಕಿ ಪೊಲೀಸ್ ಠಾಣೆ ಎದುರು ಪ್ರತಿಭಟನಾಕಾರರು ಜಮಾವಣೆ ಆಗಿ ಎಲ್ಲರನ್ನು ಬಿಡುಗಡು ಮಾಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಹಲವರು ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಪೊಲೀಸರು ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಪರಿಸರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಜೊತೆಗೆ ಉಪ್ಪಿನಂಗಡಿ ಠಾಣೆ ಸುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಪ್ಪಿನಂಗಡಿ ಠಾಣೆಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.