LATEST NEWS
ಮೇ 11 ಮತ್ತು 12 ರಂದು ಚುನಾವಣಾ ಜಾಹೀರಾತು ಪ್ರಕಟಣೆಗೆ ಅನುಮತಿ ಕಡ್ಡಾಯ

ಮೇ 11 ಮತ್ತು 12 ರಂದು ಚುನಾವಣಾ ಜಾಹೀರಾತು ಪ್ರಕಟಣೆಗೆ ಅನುಮತಿ ಕಡ್ಡಾಯ
ಉಡುಪಿ, ಮೇ. 9 :- ಪ್ರಸಕ್ತ ವಿಧಾನಸಭಾ ಚುನಾವಣೆ ಅಂಗವಾಗಿ ಮೇ 12 ರಂದು ಮತದಾನ ನಡೆಯುವ ದಿನದ 48 ಗಂಟೆಗಳ ಮುನ್ನ ಅಂದರೆ ಮೇ 10 ರ ಸಂಜೆ 6 ಗಂಟೆಯಿಂದ ಚುನಾವಣಾ ಅಭ್ಯರ್ಥಿಗಳ ಜಾಹೀರಾತುಗಳು ಪ್ರಕಟಗೊಳ್ಳಬೇಕಿದ್ದರೆ ಅಂತಹ ಜಾಹೀರಾತಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ತಿಳಿಸಿದ್ದಾರೆ.
ಯಾವುದೇ ಪತ್ರಿಕೆಗಳಲ್ಲಿ ಮೇ 11 ಮತ್ತು 12 ರಂದು ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಜಾಹೀರಾತು ನೀಡುವ ವಿಷಯಗಳೊಂದಿಗೆ ಎರಡು ಸ್ವಯಂ ಧೃಢೀಕೃತ ಪ್ರತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಮೇ 9 ರೊಳಗಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ಪೂರ್ವಾನುಮತಿ ಪಡೆಯಬೇಕು.

ಪ್ರಮಾಣ ಪತ್ರ ಪಡೆಯದೆ 48 ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯಿದೆ- 1951 ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ.
ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಟಿವಿ,ರೆಡಿಯೋ,ಕೇಬಲ್ ನೆಟ್‍ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧಿ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ. ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಲ್ಲಾ ಮಾಧ್ಯಮಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಮೇ 10 ರಿಂದ 12 ರವರೆಗೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆ ಸುಗಮವಾಗಿ ಹಾಗೂ ನ್ಯಾಯಯುತವಾಗಿ, ನಿರ್ಭೀತವಾಗಿ ನಡೆಸಲು ನೆರವಾಗಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.