DAKSHINA KANNADA
ರೌಡಿಶೀಟರ್ ಗೆ ತಲೆ ಬಾಗುವ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಜನ ಬೇರೇನನ್ನು ನಿರೀಕ್ಷಿಸಲು ಸಾಧ್ಯ: ಬಿ.ಕೆ.ಹರಿಪ್ರಸಾದ್
ಪುತ್ತೂರು, ಮಾರ್ಚ್ 15: ರೌಡಿಶೀಟರ್ ಗೆ ತಲೆ ಬಾಗುವ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಜನ ಬೇರೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೇಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.
ಪುತ್ತೂರಿನ ಮುರದಲ್ಲಿ ಮಾರ್ಚ್ 15 ರಂದು ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ನೆಪದಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಮೊನ್ನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈ ವೇ ಉದ್ಘಾಟನೆಗೆ ಆಗಮಿಸಿದ್ದ ಮೋದಿಯನ್ನು ಸ್ವಾಗತಿಸಲು ಆ ಭಾಗದ ರೈತರನ್ನು ಸಿದ್ಧಪಡಿಸಲು ಬಿಜೆಪಿ ಯತ್ನಿಸಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಯಾವುದೇ ರೈತ ಸಿಗದ ಕಾರಣ ಓರ್ವ ರೌಡಿಶೀಟರ್ ನನ್ನು ಪ್ರಧಾನಿಯ ಸ್ವಾಗತಕ್ಕೆ ನಿಯೋಜಿಸಿದೆ. ಪ್ರಧಾನಿ ಮೋದಿ ಆ ರೌಡಿಶೀಟರ್ ಮುಂದೆ ತಲೆಬಾಗಿ ನೀನೆ ನಮ್ಮನ್ನು ನೋಡ್ಕೋಬೇಕು ಎಂದು ತಲೆಬಾಗಿ ನಮಸ್ಕರಿಸಿದ್ದಾರೆ.
ಓರ್ವ ರೌಡಿಶೀಟರ್ ಮುಂದೆ ತಲೆಬಾಗುವ ಪ್ರಧಾನಿ ಮೋದಿಯಿಂದ ಚೈನಾ,ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೈವೇ ಕಾಮಗಾರಿ ಅಪೂರ್ಣಗೊಂಡಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈಗಲೇ ಟೋಲ್ ಸಂಗ್ರಹಿಸಲು ಆರಂಭಿಸಿದೆ ಎಂದ ಅವರು ಬಿಜೆಪಿ ದೇಶದಲ್ಲಿ ಮತ್ತೆ ರಾಜಪ್ರಭುತ್ವವನ್ನು ತರುವ ಪ್ರಯತ್ನದಲ್ಲಿದೆ. ಕೇವಲ ಪಟೇಲರಿಗೆ, ಶಾನುಭೋಗರಿಗೆ ಮಾತ್ರ ಬದುಕಲು ಇಲ್ಲಿ ಅವಕಾಶ ನೀಡಿ,ದೇಶದ ಜನರನ್ನೆಲ್ಲಾ ಗುಲಾಮರನ್ನಾಗಿ ಬಿಜೆಪಿ ಮಾಡಲಿದೆ ಎಂದು ಅವರು ಹೇಳಿದರು.