LATEST NEWS
ಪೇಜಾವರ ಶ್ರೀ ವಿಶ್ವೇಶತೀರ್ಥರು ಕಾಲವಾಗಿ ಒಂದು ವರ್ಷ…..

ಉಡುಪಿ : ನಡೆದಾಡುವ ದೇವರು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅಸ್ತಂಗತರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಹೊಸ ವರ್ಷದ ಆರಂಭಕ್ಕೆ ಇನ್ನೆರಡು ದಿನಗಳಿರುವಾಗಲೇ ಅವರು ದೇಹ ತ್ಯಜಿಸಿದ್ದರು. ದೈಹಿಕವಾಗಿ ಶ್ರೀಗಳು ಇಲ್ಲ ಎಂಬ ಕೊರಗು ಇಂದಿಗೂ ಅಷ್ಠಮಠ ಹಾಗೂ ಅವರ ಅಸಂಖ್ಯಾತ ಶಿಷ್ಯರು ಹಾಗೂ ಭಕ್ತರನ್ನು ಕಾಡುತ್ತಿದೆ.
ಡಿಸೆಂಬರ್ 19ರ ತಡರಾತ್ರಿ ಅಸ್ವಸ್ಥರಾದ ಸ್ವಾಮೀಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾ ಸೋಂಕಿನಿಂದ ಬಳಲುತ್ತಿದ್ದ ಶ್ರೀಗಳಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಸತತ 9 ದಿನಗಳ ಕಾಲ ಚಿಕಿತ್ಸೆ ನೀಡಿತು. ಬೆಂಗಳೂರಿನ ಮಣಿಪಾಲ್ ಹಾಗೂ ಏಮ್ಸ್‌ನ ತಜ್ಞ ವೈದ್ಯರ ತಂಡವೂ ಚಿಕಿತ್ಸೆಗೆ ಕೈಜೋಡಿಸಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 29ರಂದು ಇಹಲೋಕ ತ್ಯಜಿಸಿದರು.

ಅದೇ ದಿನ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಭೌತಿಕ ಶರೀರವನ್ನು ಭೂಗತಗೊಳಿಸಲಾಯಿತು. ತಿಥಿ ಪ್ರಕಾರ ಅವರ ಪ್ರಥಮ ಪುಣ್ಯಾರಾಧನೆಯನ್ನು ಡಿ. 17ರಂದು ಅದೇ ಸ್ಥಳದಲ್ಲಿ ಶಿಲಾಮಯ ವೃಂದಾವನ ಸ್ಥಾಪಿಸಿ ನಡೆಸಲಾಯಿತು. ಒಂದೇ ವಾರದಲ್ಲಿ ಡಿ. 24ರಂದು ಬೆಂಗಳೂರಿನ ಇನ್ನೊಂದು ಕಡೆ ಪ್ರಥಮ ಮೃತ್ತಿಕಾ ವೃಂದಾವನವೂ ಸ್ಥಾಪನೆಗೊಂಡಿತ್ತು.