KARNATAKA
ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ಪ್ರಯಾಣಿಕ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 05: ಭಾನುವಾರ ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡಿದ ಆರೋಪದ ಮೇಲೆ ಜಿ ಕರುಣಾಕರನ್ ಎಂಬ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಸೆಕ್ಷನ್ 336 ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ದಕ್ಕೆ, ಸೆಕ್ಷನ್ 25 (3ಬಿ) ನಿಯಮ ಉಲ್ಲಂಘನೆ ಮತ್ತು ಏರ್‌ಕ್ರಾಫ್ಟ್ ನಿಯಮ 1937 ರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 3 ರ ರಾತ್ರಿ 9.11 ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಿಂದ ಸುಡುವ ವಾಸನೆ, ಸಹ ಪ್ರಯಾಣಿಕರಿಗೆ ಬಂದಿದೆ. ಸ್ವಲ್ಪ ಸಮಯದ ನಂತರ ಈ ವಾಸನೆ ಶೌಚಾಲಯದಿಂದ ಬರುತ್ತಿದೆ ಎಂದು ಪ್ರಯಾಣಿಕರು ಅರಿತರು. ತಕ್ಷಣವೇ ಈ ವಿಚಾರವನ್ನು ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಸಿಬ್ಬಂದಿ ಶೌಚಾಲಯದ ಬಾಗಿ ತಟ್ಟಿದ್ದಾರೆ.
ಒಳಗಿದ್ದ ಜಿ ಕರುಣಾಕರನ್ ಬಾಗಿಲು ತೆರೆದಾಗ ಅವರ ಕೈಯಲ್ಲಿ ಬೀಡಿ ಇರುವುದು ಕಂಡಿದೆ. ಜಿ ಕರುಣಾಕರನ್ ತಕ್ಷಣವೇ ಅರ್ಧ ಸೇದಿದ ಬೀಡಿಯನ್ನು ಶೌಚಾಲಯದೊಳಗೆ ಹಾಕಿ ಫ್ಲೆಶ್ ಮಾಡಲು ಯತ್ನಿಸಿದರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಬಳಿಕ ವಿಮಾನವು ಕೆಐಎನಲ್ಲಿ ಲ್ಯಾಂಡ್ ಆದ ತಕ್ಷಣ, ಜಿ ಕರುಣಾಕರನ್ ಅವರನ್ನು ಬಂಧಿಸಲಾಗಿದೆ.