DAKSHINA KANNADA
ಪುತ್ತೂರಿನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ: ಗೋಪಾಲಕೃಷ್ಣ ಹೇರಳೆ

ಪುತ್ತೂರು, ಮಾರ್ಚ್ 02: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಚರ್ಚೆ ಇಂದು ಅಪ್ರಸ್ತುತವಾಗಿದ್ದು, ಸದ್ಯ ಸಂಜೀವ ಮಠಂದೂರೇ ಪುತ್ತೂರು ಶಾಸಕರಾಗಿ ಇರಲಿದ್ದಾರೆ ಎಂದು ಬಿಜೆಪಿ ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಸ್ಪಷ್ಟಪಡಿಸಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ಶಿಸ್ತನ್ನು ಉಲ್ಲಂಘಿಸಿ ನಡೆಯುವವರ ವಿರುದ್ಧ ಪಕ್ಷ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಪುತ್ತೂರಿನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಪಕ್ಷದ. ಹೈಕಮಾಂಡ್ ತೀರ್ಮಾನಿಸಲಿದೆ.

ಆದರೆ ಮುಂದಿನ ಮೇ ತಿಂಗಳವರೆಗೆ ಸಂಜೀವ ಮಠಂದೂರು ಅವರೇ ಪುತ್ತೂರು ಶಾಸಕರಾಗಿ ಇರಲಿದ್ದಾರೆ ಎಂದ ಅವರು ಬಿಜೆಪಿಯನ್ನು ಬೂತ್ ಮಟ್ಟದಿಂದ ಸದೃಢಗೊಳಿಸುವ ಹಲವು ಕಾರ್ಯಕ್ರಮಗಳನ್ನು ಪಕ್ಷ ಈಗಾಗಲೇ ಮುಗಿಸಿದ್ದು, ಮಾರ್ಚ್ 5 ರಂದು ಪುತ್ತೂರಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಸಮಾವೇಶ ನಡೆಯಲಿದೆ.
ಮಾರ್ಚ್ 11 ರಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ಸಂಜೆ 5 ಗಂಟೆಗೆ ಪುತ್ತೂರಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಸುಳ್ಯದಲ್ಲಿ ಯಾತ್ರೆಯ ರೋಡ್ ಶೋ ಕೂಡಾ ನಡೆಯಲಿದೆ ಎಂದರು. ಈ ಸಮಾವೇಶದಲ್ಲಿ ರಾಜ್ಯದ ಹಲವು ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.