National
ಪಾರ್ಲೆ ಜಿ ; ಲಾಕ್ ಡೌನ್ ಕಾಲದಲ್ಲಿ 90 ವರ್ಷದಲ್ಲೇ ಅತಿಹೆಚ್ಚು ಲಾಭದ ದಾಖಲೆ
ಇನ್ನೆನು ಮುಚ್ಚಲಿದೆ ಅನ್ನೊ ಹೊತ್ತಿಗೆ ಮತ್ತೆ ಪುಟಿದೆದ್ದ ಪಾರ್ಲೆಜಿ
ಮುಂಬೈ, ಜೂನ್ 10: ಜಗತ್ತಿನಾದ್ಯಂತ ಹೆಸರು ಮಾಡಿರುವ ಪಾರ್ಲೆ ಜಿ ಬಿಸ್ಕೆಟ್ ಕಂಪೆನಿ ಭಾರತದ ಆರ್ಥಿಕ ಕುಸಿತದಿಂದಾಗಿ ಮುಚ್ಚಿ ಹೋಯ್ತು ಅನ್ನೋ ಸುದ್ದಿ ಕೇಳಿರಬಹುದು. ಆದರೆ, ಹಾಗೆ ಕುಸಿದೇ ಹೋಯ್ತು ಎಂದುಕೊಂಡಿದ್ದ ಪಾರ್ಲೆ ಜಿ ಈಗ ತನ್ನ 90 ವರ್ಷದ ಇತಿಹಾಸದಲ್ಲೇ ಮಾಡಿರದ ಲಾಭದ ದಾಖಲೆಯನ್ನು ಲಾಕ್ ಡೌನ್ ಕಾಲದಲ್ಲಿ ಸಾಧಿಸಿದೆ.
ಯಸ್.. ಪಾರ್ಲೆ ಜಿ ಕಳೆದ ಲಾಕ್ ಡೌನ್ ಅವಧಿಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ್ದಾಗಿ ಕಂಪೆನಿ ಸಿಇಐ ಹೇಳಿಕೊಂಡಿದ್ದಾರೆ. “ನಾವು ಇಡೀ ಮಾರುಕಟ್ಟೆ ಬೆಳವಣಿಗೆಯಲ್ಲಿ 5 ಶೇಕಡಾ ಪ್ರಗತಿ ಸಾಧಿಸಿದ್ದೇವೆ. ಸೇಲ್ಸ್ ನಲ್ಲಿ 80ರಿಂದ 90 ಶೇಕಡಾ ದಷ್ಟು ಹೆಚ್ಚು ಗುರಿ ಸಾಧಿಸಿದ್ದು ಇದು ನಾವು ಇತಿಹಾಸದಲ್ಲಿ ಕಂಡಿರದ ಸಾರ್ವಕಾಲಿಕ ದಾಖಲೆಯಾಗಿದೆ ” ಎಂದು ಕಂಪೆನಿಯ ಬಿಸಿನೆಸ್ ಹೆಡ್ ಮಯಾಂಕ್ ಷಾ ಹೇಳಿದ್ದಾರೆ.
ಭಾರತದಲ್ಲಿ 130 ಕಡೆ ಬಿಸ್ಕಟ್ ಫ್ಯಾಕ್ಟರಿಗಳನ್ನು ಹೊಂದಿರುವ ಪಾರ್ಲೆ ಜಿ ಕಂಪೆನಿ, ಆ ಪೈಕಿ ಹತ್ತು ಕಡೆ ಮಾತ್ರ ಸ್ವಂತ ಆಸ್ತಿಯನ್ನು ಹೊಂದಿದೆ. ಉಳಿದೆಲ್ಲ ಕಡೆ ಹೈಯರ್ ಆಗಿ ಫ್ಯಾಕ್ಟರಿ ನಡೆಸುತ್ತಿದ್ದೇವೆ. ಚಿಪ್ಸ್, ಚಾಕಲೇಟ್ಸ್ , ಸಾಫ್ಟ್ ಡ್ರಿಂಕ್ಸ್ ಗೆ ಹೋಲಿಸಿದರೆ ನಮ್ಮ ಬಿಸ್ಕೆಟ್ ತುಂಬ ಚೀಪರ್. ಹೀಗಾಗಿ ಲಾಕ್ ಡೌನ್ ಸಂದರ್ಭದಲ್ಲಿ ಪಾರ್ಲೆ ಜಿ ಬಿಸ್ಕೆಟ್ ಹೆಚ್ಚು ಜನರ ಆಯ್ಕೆ ಆಗಿದ್ದಿರಬಹುದು ಎಂದು ಮಯಾಂಕ್ ಷಾ ವಿಶ್ಲೇಷಣೆ ಮಾಡಿದ್ದಾರೆ.
ವಾರ್ಷಿಕವಾಗಿ ಬಿಸ್ಕೆಟ್ ಮಾರುಕಟ್ಟೆ ಸುಮಾರು 36 ಸಾವಿರ ಕೋಟಿಯಷ್ಟು ವಹಿವಾಟು ಹೊಂದಿದೆ. ಮೂರು ತಿಂಗಳ ಲಾಕ್ ಡೌನ್ ಕಾಲದಲ್ಲಿ ಪಾರ್ಲೆ ಜಿ ಕಂಪೆನಿಗೆ ಸೇರಿದ ಕ್ರಾಕ್ ಜಾಕ್, ಮೊನೇಕೊ, ಹೈಡ್ ಅಂಡ್ ಸೀಕ್, ಪಾರ್ಲೆ ಬಿಸ್ಕೆಟ್ ಗಳು ಅತಿ ಹೆಚ್ಚು ಸೇಲ್ ಆಗಿದೆ. ಬ್ರಿಟಾನಿಯಾ ಕಂಪನಿಯ ಗುಡ್ ಡೇ, ಟೈಗರ್, ಮಿಲ್ಕ್ ಬಿಕೀಸ್, ಬೋರ್ಬೋನ್, ಮಾರೀ ಬಿಸ್ಕೆಟ್ ಗಳೂ ಹಾಗೆಯೇ ಬಹಳಷ್ಟು ಸೇಲ್ ಆಗಿದೆ ಎಂಬುದನ್ನು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಅಂದಹಾಗೆ, ಲಾಕ್ ಡೌನ್ ಕಾಲಕ್ಕಿಂತಲೂ ಮೊದಲೇ ಪಾರ್ಲೆ ಜಿ ಮುಚ್ಚಿ ಹೋಯ್ತು ಎಂದು ಸುದ್ದಿ ಹಬ್ಬಿದ್ದು ಹೇಗೆ ಅಂತೀರಾ.. ನಿಜಕ್ಕಾದರೆ, ಮುಂಬೈನ ವಿಲ್ಲೇ ಪಾರ್ಲೆಯಲ್ಲಿದ್ದ ಪಾರ್ಲೆ ಜಿ ಕಂಪನಿಯ ದೊಡ್ಡ ಫ್ಯಾಕ್ಟರಿ ಮುಚ್ಚಿದ್ದು ಸತ್ಯ. 1929ರಲ್ಲಿ ಮುಂಬೈನ ವಿಲ್ಲೆ ಪಾರ್ಲೆಯಲ್ಲಿ ಮೊಟ್ಟಮೊದಲು ಆರಂಭಗೊಂಡಿದ್ದ ಪಾರ್ಲೆ ಜಿ ಫ್ಯಾಕ್ಟರಿಯದು. ಆನಂತ್ರ ಹರ್ಯಾಣ, ಮಹಾರಾಷ್ಟ್ರ, ಕರ್ನಾಟಕ ಹೀಗೆ ದೇಶಾದ್ಯಂತ ನೂರಕ್ಕೂ ಹೆಚ್ಚು ಫ್ಯಾಕ್ಟರಿಗಳು ಸ್ಥಾಪನೆಯಾಗಿದ್ದವು.
ಮುಂಬೈ ಫ್ಯಾಕ್ಟರಿಯಲ್ಲಿ ನಿರೀಕ್ಷಿತ ಉತ್ಪಾದನೆ ಆಗದಿರುವ ಹಿನ್ನೆಲೆ ಅದನ್ನು ಮುಚ್ಚಲಾಗಿತ್ತು. ಹೀಗಾಗಿ 2016ರ ಜುಲೈ ತಿಂಗಳಲ್ಲಿ 82 ವರ್ಷಗಳ ಸುದೀರ್ಘ ಸೇವೆಯ ಬಳಿಕ ಮುಂಬೈ ಫ್ಯಾಕ್ಟರಿಯನ್ನು ಮುಚ್ಚಲಾಗಿತ್ತು. ಉಳಿದ ಕಡೆಯ ಫ್ಯಾಕ್ಟರಿಗಳೆಲ್ಲ ಉತ್ಪಾದನೆ ಮುಂದುವರಿಸಿದ್ದವು. ಕಳೆದ ಎರಡು ವರ್ಷಗಳ ಆರ್ಥಿಕ ಕುಸಿತದಿಂದ ಫ್ಯಾಕ್ಟರಿ ನಿಲ್ಲಿಸಿದ್ದಲ್ಲ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ, ಕೆಲವರ ಹಿತಾಸಕ್ತಿಯ ಕಾರಣದಿಂದ 2019ರ ಸೆಪ್ಟೆಂಬರ್ ನಲ್ಲಿ ಪಾರ್ಲೆ ಜಿ ಮುಚ್ಚಿಯೇ ಹೋಯ್ತು ಅಂತ ವದಂತಿ ಹಬ್ಬುವಂತಾಗಿತ್ತು.
ವಿಶೇಷ ಅಂದ್ರೆ ಮುಂಬೈನ ವಿಲ್ಲೇ ಪಾರ್ಲೆ ಎನ್ನುವುದು ಫ್ಯಾಕ್ಟರಿ ಇದ್ದ ಒಂದು ಬೀದಿಯ ಹೆಸರು. ಮುಂದೆ ಪಾರ್ಲೆ ಹೆಸರಲ್ಲೇ ಬಿಸ್ಕೆಟ್ ಪ್ರಸಿದ್ಧಿ ಪಡೆದಿದ್ದು ಕಾಕತಾಳೀಯ.