Connect with us

    LATEST NEWS

    “ಹೆತ್ತವರು, ಪೋಷಕರು ಮಕ್ಕಳ ಮೇಲೆ ನಿಗಾ ಇರಿಸಬೇಕು” -ಸ್ಪೀಕರ್ ಯು.ಟಿ.ಖಾದರ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ “ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು” ಕಾರ್ಯಕ್ರಮದ ಉದ್ಘಾಟನೆ ಗುರುವಾರ ಸಂಜೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಬಳಿಕ ಮಾತಾಡಿದ ಅವರು, “ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗುವುದು ಸುಲಭದ ಮಾತಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಆದ್ದರಿಂದ ಇದನ್ನು ತಡೆಯಲು ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೆತ್ತವರು, ಮನೆಯವರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಪೊಲೀಸ್ ಇಲಾಖೆಯಲ್ಲಿ ಟೆಸ್ಟಿಂಗ್ ಕಿಟ್ ಸಿಗುತ್ತದೆ ಅದನ್ನು ಮನೆಯಲ್ಲಿಟ್ಟು ತಿಂಗಳಿಗೊಮ್ಮೆ ಪರೀಕ್ಷೆ ಮಾಡುವುದು ಯಾಕೆ ಕಷ್ಟ? ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಪ್ರತೀ ಕಾಲೇಜಿನಲ್ಲಿ ಇಂತಹ ಟೆಸ್ಟಿಂಗ್ ನಡೆದಾಗ ಮಕ್ಕಳು ಮಾದಕ ದ್ರವ್ಯ ಸೇವಿಸಲು ಭಯ ಪಡುತ್ತಾರೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ಕೊಡಿ ಇದರಿಂದ ಸ್ವಸ್ಥ ಸಮಾಜವನ್ನು ಕಟ್ಟಬಹುದು“ ಎಂದರು.

    ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತಾಡಿ, “ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಬೇಡಿಕೆಯೂ ಹೌದು. ನಾನು ಮೊದಲ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಇಂದು ಪಂಜಾಬ್ ರಾಜ್ಯವನ್ನು ಡ್ರಗ್ಸ್ ದಂಧೆ ಬೆಂಬಿಡದೆ ಕಾಡುತ್ತಿದೆ. ಅಷ್ಟು ಭೀಕರವಾಗಿ ದಂಧೆ ಎಲ್ಲೆಡೆ ಹರಡಿದೆ. ಗಡಿಯಲ್ಲಿರುವ ಸೈನಿಕನಷ್ಟೇ ದೇಶವನ್ನು ಉಳಿಸುವ ಜವಾಬ್ದಾರಿ ಈ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಡುವವರದ್ದು. ಇದು ದೇವರು ಮೆಚ್ಚುವ ಕೆಲಸ. ಇಂತಹ ಕಾರ್ಯಕ್ರಮಕ್ಕೆ ಮಂಗಳೂರು ಮಾದರಿಯಾಗಬೇಕು“ ಎಂದರು.

    ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ನಮ್ಮ ದೇಶವನ್ನು ನಾಶ ಮಾಡುವ ದುಷ್ಟ ಷಡ್ಯಂತ್ರ ಮಾದಕ ದ್ರವ್ಯ ವ್ಯಸನದಿಂದ ನಡೆಯುತ್ತಿದೆ. ಇದನ್ನು ತಡೆಯಲು ಮನೆಯಲ್ಲಿ ಸಮಾಜದಲ್ಲಿ ಜಾಗೃತಿಯಾಗಬೇಕು. ಮಾದಕ ದ್ರವ್ಯ ಸೇವನೆ, ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು” ಎಂದರು.

    ಮಂಗಳೂರು ಮೇಯರ್ ಮನೋಜ್ ಕುಮಾರ್ ಮಾತನಾಡಿ, “ಯುವಜನತೆಯನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಟ ನಿರಂತರವಾಗಿರಬೇಕು” ಎಂದರು. ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಮಂಗಳೂರು ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂ‌ರು, ಆಶಾಜ್ಯೋತಿ ರೈ, ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ಎಸ್.ಡಿ.ಎಂ. ಕಾನೂನು ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ, ತಪಸ್ಯ ಫೌಂಡೇಶನ್ ಅಧ್ಯಕ್ಷೆ ಸಬಿತಾ ಆರ್. ಶೆಟ್ಟಿ, ಎಕ್ಕಾರ್ ರತ್ನಾಕರ್ ಶೆಟ್ಟಿ , ಸಬಿತ ಆರ್ ಶೆಟ್ಟಿ, ಅಧ್ಯಕ್ಷರು, ಎಕ್ಕಾರು ರತ್ನಾಕರ್ ಶೆಟ್ಟಿ, ವೃಂದಾ ಹೆಗ್ಡೆ ಕಾರ್ಯದರ್ಶಿ, ಮಾನಸ ರೈ ಜೊತೆ ಕಾರ್ಯದರ್ಶಿ, ಭಾರತಿ ಶೆಟ್ಟಿ ಖಜಾಂಚಿ ಮತ್ತಿತರರು ಉಪಸ್ಥಿತರಿದ್ದರು. ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪುಷ್ಪರಾಜ್ ಧನ್ಯವಾದ ಸಮರ್ಪಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *