BANTWAL
ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ – ವಿಧಾನಸಭೆ ಅಧಿವೇಶನದಲ್ಲಿ ತನಿಖೆ ಬಗ್ಗೆ ಮಾಹಿತಿ ಕೇಳಿದ ಸ್ಪೀಕರ್ ಖಾದರ್

ಬೆಂಗಳೂರು ಮಾರ್ಚ್ 05: ಬಂಟ್ವಾಳ ಫರಂಗಿಪೇಟೆಯ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ವಿಧಾನಸಭೆಯ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಸ್ವತಃ ಸ್ಪೀಕರ್ ಖಾದರ್ ಅವರೇ ಅಧಿವೇಶನದಲ್ಲಿ ಈ ಪ್ರಸ್ತಾಪ ಮಾಡಿ ಸರಕಾರದಿಂದ ಉತ್ತರ ಕೇಳಿದರು. ನಮ್ಮ ಕ್ಷೇತ್ರದ ವಿದ್ಯಾರ್ಥಿ ದಿಗಂತ್ ಎಂಬುವವನು ನಾಪತ್ತೆ ಆಗಿದ್ದಾನೆ. ಈ ಪ್ರಕರಣ ಏನು? ಇದು ಆತಂಕಕ್ಕೆ ಕಾರಣವಾಗಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಪಿಯುಸಿ ಓದುವ ಹುಡುಗ ನಾಪತ್ತೆಯಾಗಿದ್ದಾನೆ. ಪೊಲೀಸರ ಜೊತೆ ಈ ಕುರಿತಾಗಿ ಮಾತನಾಡಿದ್ದೇವೆ. ಹುಡುಗನ ಮೊಬೈಲ್ ಫೋನ್ ಮತ್ತು ಚಪ್ಪಳಿ ರೈಲ್ವೇ ಟ್ರಾಕ್ ಬಳಿ ಸಿಕ್ಕಿದೆ . ಡ್ರೋನ್ ಬಳಸಿ ನೋಡಿದರೂ ಹುಡುಗ ಕುರಿತಾದ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ವಿವರಿಸಿದರು. ಯಾವುದೇ ರೀತಿಯಲ್ಲಿ ಗಾಬರಿ ಆಗುವುದು ಬೇಡ. ನಾಪತ್ತೆಯಾದ ದಿಗಂತ್ ಹುಡುಕಾಟಕ್ಕೆ 7 ಪೊಲೀಸ್ ತಂಡ ರಚನೆ ಆಗಿದೆ. ಫೆಬ್ರವರಿ 25 ನೇ ತಾರೀಕಿನಂದು ಘಟನೆ ನಡೆದಿದೆ. ಬಾಲಕನ ಮೊಬೈಲ್ ಗೆ ಸೆಕ್ಯೂರಿಟಿ ಕೋಡ್ ಹಾಕಲಾಗಿದೆ. ಹೀಗಾಗಿ ಅದನ್ನು ಡಿಕೋಡ್ ಮಾಡಬೇಕಾಗಿದೆ ಎಂದು ತಿಳಿಸಿದರು.

ಬಾಲಕನನ್ನು ಪತ್ತೆ ಹಚ್ಚಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಸುತ್ತಮುತ್ತಲಿನ ಸಿ. ಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಆದಷ್ಟು ಬೇಗ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಧ್ಯ ಪ್ರವೇಶಿಸಿ, ಹುಡುಗ ನಾಪತ್ತೆಯಾಗಿ 8-9 ದಿನಗಳಾಯ್ತು. ಮನೆಯಿಂದ ಹೊರ ಹೋದ ವಿದ್ಯಾರ್ಥಿ ನಾಪತ್ತೆ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ. ಹುಡುಗ ಭಜನಾ ಮಂಡಳಿಯಲ್ಲಿ ಆಕ್ಟೀವ್ ಆಗಿದ್ದ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ. ಈ ನಿಟ್ಟಿನಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ಕುರಿತಾದ ಎಲ್ಲಾ ಸೂಕ್ಷ್ಮತೆ ಅರ್ಥ ಆಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಾಗುವುದು. ಈ ವಿಚಾರವಾಗಿ ಸರ್ಕಾರದ ಬದ್ಧತೆಯಿಂದ ಕೆಲಸ ಮಾಡುತ್ತದೆ ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.
1 Comment