LATEST NEWS
ಪಾಕಿಸ್ತಾನದ ಉಗ್ರರಿಗೆ ಅನಾಮಿಕನ ಕಾಟ – ಮುಂಬೈ ದಾಳಿ ಉಗ್ರನಿಗೆ ಜೈಲಲ್ಲೇ ವಿಷ
ಲಾಹೋರ್: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಉಗ್ರ ಸಾಜಿದ್ ಮೀರ್ ಗೆ ಪಾಕಿಸ್ತಾನದ ಡೇರಾ ಘಾಜಿ ಖಾನ್ ನಗರದ ಜೈಲಲ್ಲೇ ವಿಷವುಣಿಸಲಾಗಿದೆ.
ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೃಢೀಕರಿಸದ ವರದಿಗಳು ಹೇಳಿವೆ. ಕೆಲವು ತಿಂಗಳ ಹಿಂದೆ ಮೀರ್ ನನ್ನು ಲಾಹೋರ್ ಸೆಂಟ್ರಲ್ ಜೈಲಿನಿಂದಲೇ ಘಾಜಿ ಖಾನ್‌ನ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಆತನಿಗೆ ವಿಷವುಣಿಸಲಾಗಿದೆ ಎನ್ನಲಾಗಿದೆ. ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಮೀರ್‌ಸತ್ತಿದ್ದಾನೆ ಎಂದು ಹೇಳಿದ್ದರು. ಆದರೆ ಪಾಶ್ಚಿಮಾತ್ಯ ದೇಶಗಳು ಈ ಹೇಳಿಕೆ ಪ್ರಶ್ನಿಸಿ, ಆತನ ಸಾವಿಗೆ ಸಾಕ್ಷ್ಯ. ನೀಡುವಂತೆ ಆಗ್ರಹಿಸಿದ್ದವು.
ಸುಮಾರು 40ರ ಹರೆಯದ ಸಾಜಿದ್ ಮೀರ್‌ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ದಾ (ಎಲ್‌ಇಟಿ) ಉಗ್ರ ಸಂಘಟನೆಯ ಹಿರಿಯ ಸದಸ್ಯನಾಗಿದ್ದು, 2008ರ 26/11ಮುಂಬೈ ದಾಳಿಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಭಾರತಕ್ಕೆ ಬೇಕಾಗಿದ್ದಾನೆ. ಈ ಹಿಂದೆ ಅಮೆರಿಕ ಕೂಡ ಆತನ ತಲೆಗೆ 5.5 ದಶಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. 2022ರ ಜೂನ್‌ನಲ್ಲಿ, ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆಗೆ ಸಂಬಂಧಿಸಿದ ಹಣಕಾಸಿನ ಪ್ರಕರಣದಲ್ಲಿ ಮೀರ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಂದಿನಿಂದ ಆತ ಜೈಲಿನಲ್ಲಿದ್ದಾನೆ. ಈ ವರ್ಷದ ಜೂನ್‌ನಲ್ಲಿ, ವಿಶ್ವಸಂಸ್ಥೆಯು ಮೀರ್‌ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಲು ಮುಂದಾದಾಗ ಅದಕ್ಕೆ ಚೀನಾ ತಡೆ ಒಡ್ಡಿತ್ತು. ಚೀನಾ ನಡೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.