LATEST NEWS
ಪಾಕಿಸ್ತಾನದ ಟ್ರೈನ್ ನನ್ನು ಹೈಜಾಕ್ ಮಾಡಿದ ಬಲೂಚಿಸ್ತಾನದ ಹೋರಾಟಗಾರರು – ಒತ್ತೆಯಾಳಾಗಿ 450ಕ್ಕೂ ಅಧಿಕ ಪ್ರಯಾಣಿಕರು

ಲಾಹೋರ್ ಮಾರ್ಚ್ 11: ಪಾಕಿಸ್ತಾನದ ಪ್ಯಾಸೆಂಜರ್ ರೈಲನ್ನು ಬಾಂಬ್ ಸ್ಪೋಟಿಸಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೋರಾಟಗಾರರು ಹೈಜಾಕ್ ಮಾಡಿ 450ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ.
ಪಾಕಿಸ್ತಾನ ರೈಲ್ವೇ ಇಲಾಖೆಗೆ ಸೇರಿದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಲೂಚಿಸ್ತಾನ ಬಂಡುಕೋರರು ಅಪಹರಣ ಮಾಡಿದ್ದು, ಈ ರೈಲಿನ ಸುಮಾರು 9 ಬೋಗಿಗಳಲ್ಲಿದ್ದ 400ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಈ ರೈಲು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರ್‌ಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಬಂಡುಕೋರರು ಗುಂಡಿನ ದಾಳಿ ಮಾಡಿ ರೈಲು ಹೈಜಾಕ್ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಆರು ಮಂದಿ ಪಾಕಿಸ್ತಾನ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ಪಾಕಿಸ್ತಾನಿ ಸೇನಾಪಡೆಗಳು ಕಾರ್ಯಾಚರಣೆ ನಡೆಸಿದರೆ ತಮ್ಮ ವಶದಲ್ಲಿರುವ ಒತ್ತೆಯಾಳುಗಳನ್ನು ಕೊಲ್ಲಲಾಗುವುದು ಎಂದು ಬಿಎಲ್‌ಎ ವಕ್ತಾರ ಜೀಯಂಡ್ ಬಲೋಚ್ ಘೋಷಣೆ ಮಾಡಿದ್ದಾರೆ. ಯಾವುದೇ ಮಿಲಿಟರಿ ಆಕ್ರಮಣವನ್ನು ಸಮಾನವಾಗಿ ಪ್ರಬಲ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುವುದು. ಇಲ್ಲಿಯವರೆಗೆ, ಆರು ಸೇನಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ನೂರಾರು ಪ್ರಯಾಣಿಕರು BLA ಕಸ್ಟಡಿಯಲ್ಲಿ ಉಳಿದಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿ ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ” ಎಂದು BLA ವಕ್ತಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ವಿಚಾರ ತಿಳಿಯುತ್ತಲೇ ಬಲೂಚಿಸ್ತಾನದ ಬೋಲನ್ ಜಿಲ್ಲೆಯ ಮುಷ್ಕಾಫ್ ಪ್ರದೇಶಕ್ಕೆ ಪಾಕಿಸ್ತಾನ ಭದ್ರತಾ ಪಡೆಗಳು ದೌಡಾಯಿಸಿದ್ದು, ಬಲೂಚಿಸ್ತಾನ ಸರ್ಕಾರವು ತುರ್ತು ಕ್ರಮಗಳನ್ನು ವಿಧಿಸಿದೆ ಮತ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಹೇಳಿದ್ದಾರೆ.