ಸುರತ್ಕಲ್ ಸೆಪ್ಟೆಂಬರ್ 28: ಮಂಗಳೂರು ತಾಲೂಕು ಕಛೇರಿಗೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಹಲವು ದಿನಗಳಿಂದ ಜನರಿಗೆ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ದೂರಿನ ಹಿನ್ನಲೆ ಶಾಸಕರು ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ದಾಖಲೆಗಳನ್ನು ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನ ಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಕಚೇರಿಯಲ್ಲಿರುವ ಸಿಬ್ಬಂದಿಗಳಿಂದ ಒಂದಾ ಕೆಲಸ ಮಾಡಿಸಿ ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕಿ ಬಿಡಿ ಎಂದು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಸೂಚಿಸಿದರು.

ಕಚೇರಿಯಲ್ಲಿ ಇಷ್ಟು ಜನ ಇದ್ದು ದಾಖಲೆ ನೀಡದೆ ತಿಂಗಳು ಗಟ್ಟಲೆ ಏಕೆ ಸತಾಯಿಸುತ್ತಿದ್ದೀರಿ, ಕಡತ ಯಾಕೆ ವಿಲೇವಾರಿ ಆಗುತ್ತಿಲ್ಲ, ಕಾರಣ ಕೊಡಿ. ಇಲ್ಲದಿದ್ದರೆ ಇಲಾಖೆಗೆ ತನಿಖೆ ನಡೆಸಲು ಆದೇಶಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ರೆಕಾರ್ಡ್ ರೂಂನಲ್ಲಿ 4 ಜನ ಕೆಲಸಕ್ಕೆ ಇದ್ದಾರೆ. ಕಳೆದ 6 ವರ್ಷದಿಂದ ಒಂದೆರೆಡು ವರ್ಷದವರೆಗೆ ಕೆಲಸ ಮಾಡಿದ ಅಧಿಕಾರಿಗಳಿದ್ದಾರೆ. ಆದರೂ 5-6 ತಿಂಗಳು ಕೆಲಸ ಆಗದಿದ್ದರೆ ಹೇಗೆ, ಹಳೆಯ ದಾಖಲೆ ಸರಿಪಡಿಸಿಕೊಳ್ಳಲು ಆಗದಿದ್ದಕ್ಕೆ ಎನು ಕಾರಣ ಎಂದು ಕೇಳಿದ ಅವರು ಹೀಗೆಯೇ ಮುಂದುವರಿದರೆ ಕಠಿಣ ಕಾನೂನು ಕ್ರಮ ಎದುರಿಸಬೆಕಾಗಬಹುದು ಎಂದು ಎಚ್ಚರಿಸಿದರು.