LATEST NEWS
ನವೆಂಬರ್ 21 ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ :ಜಿಲ್ಲಾಧಿಕಾರಿ ಕೂರ್ಮರಾವ್ ಎಂ

ಉಡುಪಿ, ನವೆಂಬರ್ 16 : ಪ್ರಸಕ್ತ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ , ಜಿಲ್ಲೆಯ ರೈತರಿಂದ ಸ್ಥಳೀಯವಾಗಿ ಬೆಳದಿರುವ ಭತ್ತವನ್ನು ಖರೀದಿಸಲು ಜಿಲ್ಲೆಯಲ್ಲಿ ನವೆಂಬರ್ 21 ರಿಂದ ಭತ್ತ ಖರೀದಿಗೆ ನೋಂದಣಿ ಕೇಂದ್ರಗಳನ್ನು ತರೆದು, ರೈತರ ನೋಂದಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ,ಪಂಚಮುಖಿ,ಸಹ್ಯಾದ್ರಿ, ಉಷಾ.ಅಭಿಲಾಷ ಮತ್ತು ಎಂಓ4 ತಳಿಯ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಅದರಂತೆ ಸಾಮಾನ್ಯ ಭತ್ತಕ್ಕೆ ರೂ.2540.00 ದರ ನಿಗಧಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 10 ಕಡೆಗಳಲ್ಲಿ ಭತ್ತ ನೊಂದಣಿ ಕೇಂದ್ರಗಳನ್ನು ಹಾಗೂ 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ನೊಂದಣಿ ಮತ್ತು ಖರೀದಿ ಕೇಂದ್ರ ತೆರೆಯಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾದ ರೈತರು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದ್ದು, ಇದುವರೆಗೆ ಈ ತಂತ್ರಾಂಶದಲ್ಲಿ ನೊಂದಣಿಯಾಗದ ರೈತರು ನೊಂದಣಿ ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ. ಭತ್ತ ಮಾರಾಟದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವುದರಿಂದ , ಮಾರಾಟ ಸಮಯದಲ್ಲಿ ರೈತರು ಆಧಾರ್ ಸಂಖ್ಯೆ ನೊಂದಣಿಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ತಿಳಿಸಿದರು.
ಬೆಂಬಲ ಬೆಲೆಯಡಿ ಭತ್ತ ಖರೀದಿ ಕುರಿತಂತೆ , ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೊಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ತಿಳಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ತಿಳಿಸಿದರು