FILM
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಪಡ್ಡಾಯಿ ತುಳು ಸಿನೆಮಾ ಅತ್ಯುತ್ತಮ ಪ್ರಾದೇಶಿಕ ಚಿತ್ರ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಪಡ್ಡಾಯಿ ತುಳು ಸಿನೆಮಾ ಅತ್ಯುತ್ತಮ ಪ್ರಾದೇಶಿಕ ಚಿತ್ರ
ಮಂಗಳೂರು, ಎಪ್ರಿಲ್ 14 : ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ನಿರ್ಮಾಣವಾಗಿರುವ ಹಾಗೂ ಅಭಯಸಿಂಹ ನಿರ್ದೇಶಿಸಿದ ತುಳುವಿನ ‘ಪಡ್ಡಾಯಿ’ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ತುಳು ಚಲನಚಿತ್ರಕ್ಕೆ ಐದನೇ ಬಾರಿಗೆ ಸಿಗುವ ರಾಷ್ಟ್ರೀಯ ಗೌರವವಾಗಿದೆ. ಈ ಮೊದಲು ‘ಬಂಗಾರ್ ಪಟ್ಲೇರ್’, ‘ಕೋಟಿ ಚೆನ್ನಯ’, ‘ಗಗ್ಗರ’ ಹಾಗೂ ‘ಮದಿಪು’ ಸಿನೆಮಾಗಳು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದವು.
ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕದಿಂದ ಸ್ಫೂರ್ತಿ ಪಡೆದು ‘ಪಡ್ಡಾಯಿ’ ನಿರ್ಮಾಣವಾಗಿದೆ.
ಮೊಗವೀರ ಸಮುದಾಯದ ಬದುಕು ಬವಣೆಯನ್ನು ಈ ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ.
ತುಳುನಾಡಿನ ಜನಪದ ಸಂಸ್ಕೃತಿ, ಪ್ರದರ್ಶನ ಕಲೆಗಳು ಸಮೃದ್ಧವಾಗಿ ಚಿತ್ರಣಗೊಂಡಿವೆ. ಒಂದು ಗಂಟೆ 40 ನಿಮಿಷ ಅವಧಿಯ ಈ ಸಿನೆಮಾದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್, ರವಿ ಭಟ್, ಸದಾಶಿವ ಧರ್ಮಸ್ಥಳ, ಶ್ರೀನಿಧಿ ಆಚಾರ್, ಅವಿನಾಶ್ ರೈ, ಮಲ್ಲಿಕಾ ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಸಂತೋಷ್ ಶೆಟ್ಟಿ, ಪ್ರಭಾಕರ್ ಕಾಪಿಕಾಡ್ ಪ್ರಮುಖ ಭೂಮಿಕೆಗಳಲ್ಲಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪುತ್ತೂರಿನ ವಿಷ್ಣುಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಕಾಶ್ ಪಂಡಿತ್ ಸಂಕಲನ, ಜೇಮೀ ಡಿ’ಸಿಲ್ವ ಧ್ವನಿಗ್ರಹಣ, ಜೇಮೀ ಹಾಗೂ ಶಿಶಿರ ಕೆ.ವಿ. ಧ್ವನಿ ವಿನ್ಯಾಸ ಮತ್ತು ರಾಜೇಶ್ ಕುಡ್ಲ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ‘ಪಡ್ಡಾಯಿ’ ಸಿನೆಮಾವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ ಹಾಗೂ ಇನ್ನೋವೇಟಿವ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಕರಾವಳಿಯಲ್ಲಿ ತೆರೆ ಕಾಣಲಿದೆ.